ಶಿವಮೊಗ್ಗ:ಸಾಗರ ತಾಲೂಕಿನ ಹೊಸಹಳ್ಳಿ, ಹಂಸಗಾರು ಮತ್ತು ಗಿಳಿಗಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಕೇಶಿಯಾ ಮರಗಳ ಕಡಿತಲೆ ಮತ್ತು ಸಾಗಾಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರು ದಿನಗಳ ಒಳಗಾಗಿ ತನಿಖೆ ನಡೆಸಿ ವರದಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಡಿಎಫ್ಒ ಮೋಹನ್, "ಅಕ್ರಮವಾಗಿ ಅಕೇಶಿಯಾ ಮರಗಳ ಕಡಿತಲೆ ಮತ್ತು ಸಾಗಣೆ ಸಂಬಂಧ ಗ್ರಾಮಸ್ಥರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದ ಹಿನ್ನೆಲೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ರೇಂಜರ್ ಕೊಟ್ಟ ತನಿಖಾ ವರದಿಯನ್ನು ಉನ್ನತಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ತಲುಪಿಸಲಾಗುತ್ತದೆ" ಎಂದು ತಿಳಿಸಿದರು.