ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿ ವಿಡಿಯೋ ಸರ್ವೈಲೆನ್ಸ್ ತಂಡದ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಡಿ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ ಸಿ ಶ್ರೀನಿವಾಸ್ ಹಾಗೂ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ನಿಯಮದಡಿ ನೋಡಲ್ ಆಫೀಸರ್ ನೀಡಿರುವ ದೂರಿನನ್ವಯ ಪುಲಿಕೇಶಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಮಂಗಳವಾರ ಮಧ್ಯಾಹ್ನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎ ಸಿ ಶ್ರೀನಿವಾಸ್ ಅವರ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆ ನಡೆಸಿರುವ ಮಾಹಿತಿ ಪಡೆದ ನೋಡಲ್ ಆಫೀಸರ್ ಹಾಗೂ ವೀಡಿಯೋ ಸರ್ವೈಲೆನ್ಸ್ ತಂಡ ಸ್ಥಳಕ್ಕೆ ತೆರಳಿ ವಿಚಾರಣೆ ಮಾಡಿತು. ಈ ವೇಳೆ 'ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಲು ಸಭೆ ಸೇರಲಾಗಿದೆ' ಎಂದು ಶಾಸಕರ ಬೆಂಬಲಿಗರರು ಉತ್ತರ ನೀಡಿದ್ದರು.