ಕರ್ನಾಟಕ

karnataka

ETV Bharat / state

ಜೈಲಿನಲ್ಲಿ ಗಾಂಜಾ, ಗನ್ ಪೂರೈಕೆ ಆರೋಪ : ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Ganja And Guns in Jail - GANJA AND GUNS IN JAIL

ಜೈಲಿನಲ್ಲಿ ಗಾಂಜಾ ಮತ್ತು ಗನ್ ಪೂರೈಕೆ ಆರೋಪ ಹಿನ್ನೆಲೆ ಇದನ್ನು ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

HIGH COURT INSTRUCTS  GOVERNMENT  JAIL RULES VIOLATIONS  BENGALURU
ಹೈಕೋರ್ಟ್ (ETV Bharat)

By ETV Bharat Karnataka Team

Published : Aug 21, 2024, 9:34 AM IST

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆಯಾಗುತ್ತಿದೆ ಮತ್ತು ಹಣ ವಸೂಲಾತಿಗೆ ಜೈಲು ಅಧಿಕಾರಿಗಳೇ ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆ ಎಂಬುದಾಗಿ ವಕೀಲರೊಬ್ಬರು ಹೈಕೋರ್ಟ್‌ ಪೀಠದ ಮುಂದೆ ಗಂಭೀರವಾದ ಆರೋಪ ಮಾಡಿದ್ದಾರೆ. ಇದನ್ನು ಕೇಳಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅಚ್ಚರಿ ವ್ಯಕ್ತಪಡಿಸಿ, ಜೈಲಿನಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆ ಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬರಿಗೆ ಮನೆ ಊಟ ಪೂರೈಸಲು ಅನುಮತಿ ನೀಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಬೇಕು ಎಂದು ಕೈದಿಯ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಪರ ವಕೀಲ ಸಿರಾಜುದ್ದೀನ್‌ ಅಹ್ಮದ್‌ ಹಾಜರಾಗಿ, ತಮ್ಮ ಕಕ್ಷಿದಾರನ ಅಳಿಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಅವರಿಗೆ ಮನೆ ಊಟ ಪೂರೈಸಲು ಅನುಮತಿ ನೀಡಲು ಕೋರಿ ಜೈಲು ಅಧೀಕ್ಷಕರು, ಕಾರಾಗೃಹ ಇಲಾಖೆಯ ಡಿಜಿಪಿಗೆ ಮನವಿ ಮಾಡಲಾಗಿದೆ. ಆದರೆ, ಮನೆ ಊಟ ಸರಬರಾಜು ಮಾಡಲು ಅನುಮತಿ ನೀಡಿದರೆ, ಜೈಲಿನ ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಲಾಗುತ್ತಿದೆ. ಬಳ್ಳಾರಿ, ಬೆಳಗಾವಿ, ಚಿತ್ರದುರ್ಗದ ಜೈಲಿನಲ್ಲಿ ಕೈದಿಗಳಿಗೆ ಮನೆ ಊಟ ಸರಬರಾಜು ಮಾಡಲು ಅನುಮತಿ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಜೈಲಿನಲ್ಲಿ ಬಿಡುತ್ತಿಲ್ಲ. ಅಲ್ಲದೆ, ರಾಜ್ಯದ ಜೈಲುವೊಂದರ ಒಳಗಡೆಗೆ ನಿಷೇಧಿತ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ನಿಷೇಧಿತ ವಸ್ತುಗಳು ಅಂದರೆ ಯಾವುವು? ಎಂದು ಕೇಳಿದರು. ಸಿರಾಜುದ್ದೀನ್‌ ಅಹ್ಮದ್‌ ಉತ್ತರಿಸಿ, ಮೊಬೈಲ್‌, ಗಾಂಜಾ, ಗನ್‌ ಮತ್ತು ಬುಲೆಟ್‌ ಅನ್ನು ಜೈಲಿನ ಒಳಗಡೆಗೆ ಜೈಲು ಅಧಿಕಾರಿಗಳೇ ಪೂರೈಸುತ್ತಿದ್ದಾರೆ. ಆ ಕುರಿತು ಕೈದಿಯೊಬ್ಬರು ತನ್ನ ಪತ್ನಿಗೆ ಮಾಹಿತಿ ನೀಡಿದ್ದಾರೆ. ಕೈದಿಯ ಪತ್ನಿಯು ಕಾರಾಗೃಹ ಡಿಜಿಪಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ. ಇದರಿಂದ ಕೈದಿಯನ್ನು ಏಕಾಂತ ಸೆರೆಮನೆ ವಾಸಕ್ಕೆ ದೂಡಲಾಗಿದೆ. ಇನ್ನು ಕಾರಾಗೃಹದ ಜೈಲರ್ ಒಬ್ಬರು ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಆರೋಪ ಕೇಳಿದ ನ್ಯಾಯಮೂರ್ತಿಗಳು, ಸುಪಾರಿಯೇ? ಎಂದು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ, ಊಟದ ವ್ಯಾಪ್ತಿಯನ್ನು ನೀವು ವಿಸ್ತರಣೆ ಮಾಡುತ್ತಿದ್ದೀರಿ ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರು. ನಂತರ ರಾಜ್ಯ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಎಸ್‌ಪಿಪಿ ಅವರೇ ಏನಿದು ಕಾರಾಗೃಹದಲ್ಲಿ ಹಳೆಯಕಾಲದ ಸಮಸ್ಯೆಗಳು? ಎಂದು ಪ್ರಶ್ನಿಸಿದರು. ಅದಕ್ಕೆ ಅರ್ಜಿದಾರರ ಪರ ವಕೀಲರು, ಇದು ಸಾಂಪ್ರದಾಯಿಕ ಸಮಸ್ಯೆಗಳು ಎಂದರಲ್ಲದೆ, ಪ್ರಕರಣದ ಕುರಿತು ಹೆಚ್ಚಿನ ವಿವರ ನ್ಯಾಯಪೀಠಕ್ಕೆ ನೀಡಲು ಮುಂದಾದರು.

ಸಾಂಪ್ರದಾಯಿಕ ಪದ ಕೇಳಿ ನಗಾಡಿದ ನ್ಯಾಯಮೂರ್ತಿಗಳು, ಸದ್ಯ ನಿಮ್ಮ ಅರ್ಜಿ ವಿಚಾರಣೆಗೆ ಬಂದಿಲ್ಲವಲ್ಲವೇ. ನಿಮ್ಮ ಅರ್ಜಿ ವಿಚಾರಣೆಗೆ ಬಂದ ದಿನದಂದು ವಾದ ಮಂಡಿಸಿ. ಈಗ ಬೇಡ ಎಂದು ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿದರು. ನಂತರ ವಕೀಲ ಸಿರಾಜುದ್ದಿನ್‌ ಅಹ್ಮದ್‌ ಆರೋಪಿಸಿರುವಂತೆ ಕಾರಾಗೃಹದಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ವಿಚಾರಣೆಗೆ ಹಾಜರಿದ್ದ ರಾಜ್ಯ ಸರ್ಕಾರಿ ಅಭಿಯೋಜಕರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಜೊತೆಗೆ, ಸಿರಾಜುದ್ದಿನ್‌ ಅಹ್ಮದ್‌ ವಕಾಲತ್ತು ವಹಿಸಿರುವ ಅರ್ಜಿಯ ವಿಚಾರಣೆಯನ್ನು ಸೆ.5ಕ್ಕೆ ನಿಗದಿಪಡಿಸಿ ಆದೇಶಿಸಿದರು.

ಓದಿ:ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳಲ್ಲಿ ಮಿತಿಗಿಂತಲೂ ಹೆಚ್ಚು ಪ್ರವೇಶ : ಕ್ರಮಕ್ಕೆ ಹೈಕೋರ್ಟ್ ಸೂಚನೆ - Excessive Admission in Hostels

ABOUT THE AUTHOR

...view details