ಫಾಸ್ಟ್ಟ್ಯಾಗ್ ಸಮಸ್ಯೆ ಪ್ರಶ್ನಿಸಿದ್ದಕ್ಕೆ ಟೋಲ್ ಸಿಬ್ಬಂದಿಯಿಂದ ಹಲ್ಲೆ ಆರೋಪ ಕಾರವಾರ: ಫಾಸ್ಟ್ಟ್ಯಾಗ್ ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿರುವುದನ್ನು ಪ್ರಶ್ನಿಸಿದ ಪ್ರಯಾಣಿಕರ ಮೇಲೆಯೇ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದ ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
''ಮಂಗಳೂರಿನಿಂದ ಎರಡು ಕಾರುಗಳಲ್ಲಿ ಗದಗದ ಲಕ್ಷ್ಮೇಶ್ವರಕ್ಕೆ ಕುಟುಂಬದವರು ತೆರಳುತ್ತಿದ್ದೆವು. ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್ ದಾಟುವಾಗ ಫಾಸ್ಟ್ಟ್ಯಾಗ್ ಸರಿಯಾಗಿ ವರ್ಕ್ ಆಗಲಿಲ್ಲ. ಆಗ ಟೋಲ್ಗೇಟ್ ಸಿಬ್ಬಂದಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಕಾರಿನಲ್ಲಿದ್ದವರನ್ನು ಹೊರಗೆಳೆದು ಗಲಾಟೆ ಮಾಡಿದರು. ಅಲ್ಲದೆ ಕಾರಿನ ಗಾಜು ಪುಡಿ ಮಾಡಿದ್ದಾರೆ'' ಎಂದು ಆರೋಪಿಸಿದ್ದಾರೆ.
ಮಂಗಳೂರು ಫಳ್ನೀರ್ ನಿವಾಸಿಗಳಾದ ಆಯಿಷಾ ರಾಮಲತ್(45), 14 ವರ್ಷದ ಬಾಲಕಿ, ಕೆ.ಮುಜೀಬ್ ಸೈಯ್ಯದ್ (48) ಗಾಯಗೊಂಡವರು. ''ಮುಜೀಬ್ ಮೇಲೆ ಹಲ್ಲೆ ನಡೆಸಿ, ಪುತ್ರಿಯ ಕೂದಲು, ಚಿನ್ನಾಭರಣ ಎಳೆದು ಜೀವ ಬೆದರಿಕೆ ಹಾಕಿದ್ದಾರೆ'' ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಆಯಿಷಾ, ಮುಜೀಬ್ ಸೈಯದ್, ಮಗಳು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಕೆ.ಮುಜೀಬ್ ಸೈಯದ್ ಮಾತನಾಡಿ, ನಿನ್ನೆ ರಾತ್ರಿ ನಾವು ಕುಟುಂಬ ಸಮೇತವಾಗಿ ಎರಡು ಕಾರಿನಲ್ಲಿ ಲಕ್ಷ್ಮೇಶ್ವರದ ದೂದನಾಳದ ದರ್ಗಕ್ಕೆ ಹೊರಟಿದ್ದೆವು. ಎರಡು ಕಾರು ಇದ್ದಿದ್ದರಿಂದ ನಮ್ಮ ಕಾರು ಹೊಳೆಗದ್ದೆ ಟೋಲ್ ದಾಟಿ 5 ಕಿ,ಮೀ. ನಷ್ಟು ಮುಂದೆ ಸಾಗಿತ್ತು. ಮೊದಲ ಕಾರಿನಲ್ಲಿದ್ದ ನಮಗೆ ರಾತ್ರಿ 8.15ಕ್ಕೆ ನನ್ನ ಮಗನಿಂದ ಕರೆ ಬಂದಿತ್ತು. ಟೋಲ್ಗೇಟ್ ಬಳಿ ನಮ್ಮನ್ನು ಹೊಡಿತಿದ್ದಾರೆ ಎಂದು ತಿಳಿಸಿದ್ದಾನೆ. ಈ ವೇಳೆ ನಾವು ಘಟನಾ ಸ್ಥಳಕ್ಕೆ ತೆರಳಿದೆವು. ಆಗ ಇವರು ಕೂಡ ಅದೇ ಕುಟುಂಬದವರು ಎಂದು ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ. ಅಲ್ಲದೇ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡ ಮಾಡಿದ್ದಾರೆ. ಇದರಲ್ಲಿ ಕಿರಣ್ ಎಂಬಾತ ರಾಡ್ನಿಂದ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಕಾರಿನಲ್ಲಿದ್ದ ಒಂದೂವರೆ ವರ್ಷದ ಮಗುವಿಗೂ ಗಾಯಗಳಾಗಿವೆ. ಘಟನೆಯಲ್ಲಿ ನಮ್ಮ ಬಳಿಯಿದ್ದ ಚಿನ್ನದ ಸರ, ಕೈ ಉಂಗುರಗಳು ಕಾಣೆಯಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಟೋಲ್ ಸಿಬ್ಬಂದಿಗಳಾದ ಕಿರಣ್, ಸತೀಶ್, ಮಂಜುನಾಥ ಸೇರಿ ಇತರರಿಂದ ಹಲ್ಲೆಯಾಗಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ತಂದೆ ತಾಯಿಗೆ ತಿಳಿಸದೆ 24ರ ಯುವಕನೊಂದಿಗೆ 14ರ ಬಾಲಕಿ ಮದುವೆ: ಪ್ರಕರಣ ದಾಖಲು