ಕರ್ನಾಟಕ

karnataka

ETV Bharat / state

ಎಲ್ಲ ಗಲಭೆಯ ಘಟನೆಗಳನ್ನು ಎನ್‍ಐಎ ತನಿಖೆಗೆ ಕೊಡಿ: ಬಿ.ವೈ. ವಿಜಯೇಂದ್ರ ಆಗ್ರಹ - B Y Vijayendra

ರಾಜ್ಯದ ಕಾಂಗ್ರೆಸ್ ಸರ್ಕಾರದ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ (ETV Bharat)

By ETV Bharat Karnataka Team

Published : Sep 20, 2024, 5:26 PM IST

ಬೆಂಗಳೂರು: ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯಿಂದ ಶಾಂತಿ - ಸುವ್ಯವಸ್ಥೆ ಕದಡುವ ಕೆಲಸ ಆಗಿದ್ದು, ಎಲ್ಲ ಗಲಭೆ ಘಟನೆಗಳನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ನಿಮ್ಮ ನೇತೃತ್ವದಲ್ಲಿ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್‍ಐಎಯಿಂದ ತನಿಖೆ ಆಗಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ:ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣ ಬದಿಗಿಡಿ. ಎಲ್ಲ ಸಮಾಜದ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಘಟನೆಗಳ ತನಿಖೆಯನ್ನು ಎನ್‍ಐಎಗೆ ಕೊಡಿ. ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ. ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಪೊಲೀಸರ ಕಣ್ಮುಂದೆ ಇದೆಲ್ಲ ನಡೆದರೂ ಅವರು ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.

ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ:ರಾಜ್ಯದ ಕಾಂಗ್ರೆಸ್ ಸರ್ಕಾರದ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ರಾಜ್ಯದಲ್ಲಿ ಮೆರೆಯುತ್ತಿದ್ದಾರೆ. ವಿಪಕ್ಷವಾದ ಬಿಜೆಪಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕೆಂದು ಚರ್ಚಿಸಲಿದ್ದೇವೆ. ರಾಜ್ಯದ ಅರಾಜಕತೆ ದಿನೇ ದಿನೇ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಂದಾದ ಮೇಲೆ ಒಂದರಂತೆ ದುರ್ಘಟನೆಗಳು ನಡೆಯುತ್ತಿವೆ. ನಾಗಮಂಗಲದಲ್ಲಿ ಆದ ದುರ್ಘಟನೆಯ ಬಳಿಕ ಪಾಂಡವಪುರದಲ್ಲಿ ಪೊಲೀಸರು ಏಕಾಏಕಿ ಸಂಘದ ಕಾರ್ಯಾಲಯಕ್ಕೆ ನುಗ್ಗಿ ದಬ್ಬಾಳಿಕೆ ಮಾಡಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಘಟನೆ ನಡೆದಿದೆ. ಹಿಂದೂ ಯುವಕರು ಶಾಂತಿಯುತವಾಗಿ ಗಣಪತಿ ಮೆರವಣಿಗೆ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಟೀಕಿಸಿದರು.

ಪೊಲೀಸ್ ಅಧಿಕಾರಿಗಳಿಗೂ ಕಲ್ಲಿನ ಪೆಟ್ಟು ಬಿದ್ದಿದೆ. ದಾವಣಗೆರೆ, ನಾಗಮಂಗಲ ಸೇರಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ಈ ರಾಜ್ಯದಲ್ಲಿ ಚುನಾಯಿತ ಸರ್ಕಾರ, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆ ಎಂಬುದೇ ಮರೆತು ಹೋಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಇದೆ, ಪರಮೇಶ್ವರ್ ಅಂಥವರು ಗೃಹ ಸಚಿವರಾಗಿದ್ದಾರೆ. ಹಿಂದೂಗಳ ಮೇಲೆ ದಾಳಿ ಏನೇ ಆದರೂ ಅದನ್ನು ಸಣ್ಣ ಘಟನೆ ಎಂದು ರಾಜ್ಯ ಸರ್ಕಾರ ಕೈಕಟ್ಟಿಕೊಂಡು ಕೂರುತ್ತದೆ ಎಂಬ ಧೈರ್ಯ- ವಿಶ್ವಾಸ ದೇಶದ್ರೋಹಿಗಳಲ್ಲಿದೆ ಎಂದು ಟೀಕಿಸಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಪಕ್ಷದ ಮುಖಂಡ ಭಾಸ್ಕರ್ ರಾವ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ:ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯರಿಂದ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ - Mysuru Dasara 2024

ABOUT THE AUTHOR

...view details