ಬಾಗಲಕೋಟೆ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾತನಾಡಿದ ಅವರು, 8,95,432 ಪುರುಷ, 9,10,751 ಮಹಿಳಾ ಹಾಗೂ 94 ಇತರೆ ಮತದಾರರು ಸೇರಿ ಒಟ್ಟು 18,06,183 ಮತದಾರರು ಮತ ಚಲಾಯಿಸಲಿದ್ದಾರೆ. ಇದಕ್ಕಾಗಿ 1946 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಧೋಳ ಮೀಸಲು ಕ್ಷೇತ್ರದಲ್ಲಿ 212, ತೇರದಾಳದಲ್ಲಿ 236, ಜಮಖಂಡಿ 232, ಬೀಳಗಿ 260, ಬಾದಾಮಿ 260, ಬಾಗಲಕೋಟೆ 267 ಹಾಗೂ ಹುನಗುಂದ ಕ್ಷೇತ್ರದಲ್ಲಿ 255, ನರಗುಂದದಲ್ಲಿ 220 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 1946 ಮತಗಟ್ಟೆಗಳ ಪೈಕಿ 1683 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 70 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫರ್, 250 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಪ್ರೆಸಿಡಿಂಗ್ ಆಫೀಸರ್ ಹಾಗೂ 3 ಜನ ಪೋಲಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಶೇ.120 ರಷ್ಟು ಹೆಚ್ಚುವರಿ ಸಿಬ್ಬಂದಿಗಳು ಸೇರಿ ಒಟ್ಟು 9,274 ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಕುರೇರ ಮಾತನಾಡಿ, ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಒಟ್ಟು 3 ಪ್ರಕರಣಗಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಹುನಗುಂದ ಮತಕ್ಷೇತ್ರದಲ್ಲಿ 2 ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಒಂದು ಪ್ರಕರಣ ದಾಖಲಾಗಿವೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿ ವಿವರಣೆ ಪಡೆದುಕೊಳ್ಳಲಾಗಿದೆ. ಇಲ್ಲಿಯವರೆಗೆ 2.44 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದ್ದು, ಹಣವನ್ನು ದಾಖಲಾತಿ ಒದಗಿಸಿದ ಹಿನ್ನೆಲೆಯಲ್ಲಿ ವಾಪಸ್ ಕೊಡಲಾಗಿದೆ. 1.07 ಕೋಟಿ ಮೊತ್ತದ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದರು.