ಬೆಂಗಳೂರು: ''ಬಿಜೆಪಿಯವರಿಗೆ ಅನುಕೂಲ ಮಾಡಿಕೊಳ್ಳುವುದಕ್ಕೇ ಅಂತಲೇ ಇಷ್ಟೊಂದು ಹಂತದಲ್ಲಿ ಚುನಾವಣೆ ನಡೆಯುತ್ತಿದೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಖರ್ಗೆ, ''ಚುನಾವಣಾ ಆಯೋಗವು ಏಳು ಹಂತದಲ್ಲಿ ಚುನಾವಣೆ ಘೋಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ನಾಲ್ಕೈದು ಹಂತದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಬಾರಿ ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದು ಸರಿಯಾದ ಪ್ರಕ್ರಿಯೆ ಅನ್ನಿಸಲ್ಲ. ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಇದು ಸಮಸ್ಯೆಯಾಗುತ್ತದೆ. ಇಂದಿನಿಂದಲೇ ಕೋಡ್ ಆಫ್ ಕಂಡಕ್ಟ್ ಬಂದಿದೆ. ಮಕ್ಕಳ ಸ್ಕಾಲರ್ಶಿಪ್, ಕೂಲಿ ಕಾರ್ಮಿಕರಿಗೆ ಸೇರಿದಂತೆ ಯಾವುದಕ್ಕೂ ಹಣ ಬಿಗುಗಡೆ ಆಗುವುದಿಲ್ಲ. ಮೇ ತಿಂಗಳಲ್ಲಿ ಮುಗಿಸಿದ್ದರೆ ಬಹಳಷ್ಟು ಜನರಿಗೆ ಅನುಕೂಲ ಆಗುತ್ತಿತ್ತು. ಬಿಜೆಪಿಯವರು ಯಾವ್ಯಾವ ಕ್ಷೇತ್ರ, ಊರುಗಳಿಗೆ ಹೋಗಿ ಪ್ರಚಾರ ಮಾಡಿಲ್ವೋ ಅಲ್ಲೆಲ್ಲ ಈಗ ಪ್ರಚಾರಕ್ಕೆ ಹೋಗಲಿದ್ದಾರೆ'' ಎಂದರು.
20 ಸ್ಥಾನ ಗೆಲ್ಲುತ್ತೇವೆ ಎಂದ ಡಿಕೆಶಿ:ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ''ಇಡೀ ದೇಶಕ್ಕೆ 7 ಹಂತದ ಚುನಾವಣೆ ಘೋಷಣೆ ಆಗಿದೆ. ರಾಜ್ಯದಲ್ಲಿ 2 ಹಂತದ ಚುನಾವಣೆ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ಹಬ್ಬ, ಅವಧಿ ಮುಗಿದ ಚುನಾವಣೆಯಾಗಿದ್ದು, ನಮಗೆ ಆಶ್ಚರ್ಯ ಏನಿಲ್ಲ. ಚುನಾವಣೆ ಸಂತೋಷ, ಆತ್ಮವಿಶ್ವಾಸದಿಂದ ಸ್ವೀಕರಿಸುತ್ತೇವೆ. ಕಳೆದ 7 - 8 ತಿಂಗಳಿಂದ ಕಾರ್ಯಕರ್ತರನ್ನು ಚುನಾವಣೆಗೆ ತೆಗೆದುಕೊಂಡಿದ್ದೇವೆ. ನುಡಿದಂತೆ ನಡೆದಿದ್ದೇವೆ, ಕೊಟ್ಟ ಅವಕಾಶದಲ್ಲಿ ಜನರ ಋಣ ತೀರಿಸುತ್ತಿದ್ದೇವೆ. ನಮ್ಮ ಎಲ್ಲ ಅಭ್ಯರ್ಥಿಗಳನ್ನು ಬೇಗ ಘೋಷಣೆ ಮಾಡ್ತೇವೆ'' ಎಂದರು.