ಅಂಜಲಿ ಸಹೋದರಿ ಯಶೋಧ (ETV Bharat) ಹುಬ್ಬಳ್ಳಿ: ಅಕ್ಕನ ಸಾವನ್ನು ಕಣ್ಣಾರೆ ನೋಡಿ ನನಗೆ ಮನಸ್ಸಿಗೆ ನೋವಾಗಿತ್ತು. ಇದರಿಂದ ಬಹಳ ನೊಂದುಕೊಂಡಿದ್ದೆ. ನನಗೆ ಪೊಲೀಸರ ಮೇಲೆ ನಂಬಿಕೆಗಿಂತ ನಿರಂಜನ ಹಾಗೂ ಅನೂಪ ಅಂಕಲ್ ಅವರ ಮೇಲೆ ನಂಬಿಕೆ ಇದೆ ಎಂದು ಮೃತ ಅಂಜಲಿ ಅವರ ಸಹೋದರಿ ಯಶೋಧ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೋರ್ಟ್ ಆರ್ಡರ್ ಬಂದಿದೆ ಅಂತ ಅವನಿಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಅವನು ನಮ್ಮ ಅಕ್ಕನ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತಾಡ್ತಿದ್ದಾನೆ. ಹಾಗಾಗಿ ಮನಸ್ಸಿಗೆ ನೋವಾಗಿದೆ. ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ. ಅವನಿಗೆ ಗಲ್ಲು ಶಿಕ್ಷೆ ಕೊಡಿ, ಇಲ್ಲ ಎನ್ಕೌಂಟರ್ ಮಾಡಿ ಎಂದು ಒತ್ತಾಯಿಸಿದರು.
ಅಂಜಲಿ ಕೊಲೆ ಪ್ರಕರಣ :ಪ್ರೀತಿ ನಿರಾಕರಿಸಿದ್ದ ಕಾರಣಕ್ಕೆ ಕಳೆದ ಬುಧವಾರ (ಮೇ 15) ಬೆಳಗ್ಗೆ ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ (20) ಮನೆಗೆ ನುಗ್ಗಿದ ಯುವಕ ಚಾಕುವಿನಿಂದ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಇರಿದು ಪರಾರಿಯಾಗಿದ್ದ. ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಮನೆಯವರ ಎದುರಲ್ಲೇ ಯುವತಿ ಅಂಜಲಿ ಕೊನೆಯುಸಿರೆಳೆದಿದ್ದಳು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ (21) ಎಂಬಾತನನ್ನು ದಾವಣಗೆರೆಯಲ್ಲಿ ರೈಲ್ವೆ ಪೊಲೀಸರ ನೆರವಿನೊಂದಿಗೆ ಬಂಧಿಸಿ ಹುಬ್ಬಳ್ಳಿಗೆ ಕರೆತರಲಾಗಿದೆ. ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವಾದ ಕೆಲ ದಿನಗಳಲ್ಲೇ ಅಂಜಲಿ ಹತ್ಯೆ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ :ಅಂಜಲಿ ಕೊಲೆ ಪ್ರಕರಣ: ’ಅವನು ಮಾಡಿದ್ದು, ಅವನೇ ಅನುಭವಿಸಬೇಕು’: ಆರೋಪಿ ತಾಯಿಯ ಪ್ರತಿಕ್ರಿಯೆ - WHAT SAYS ACCUSED MOTHER