ಹುಬ್ಬಳ್ಳಿ:ನನ್ನ ವಿರುದ್ಧ ಪ್ರತಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದಿದೆ. ನಾನು ಅದರ ಬಗ್ಗೆ ಮಾತನಾಡುವದಿಲ್ಲ. ನಮ್ಮ ಕಾರ್ಯತಂತ್ರವನ್ನು ನಾವು ಚೆನ್ನಾಗಿ ಮಾಡುತ್ತಿದ್ದೇವೆ. ಷಡ್ಯಂತ್ರಕ್ಕಿಂತ ರಾಜಕೀಯ ವಿರೋಧಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರಲ್ಲಿಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಷಡ್ಯಂತ್ರ ಮೀರಿ ನನಗೆ ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಜನರು ನನಗೆ ಆಶೀರ್ವಾದ ಮಾಡ್ತಾರೆ. ಪ್ರತಿ ಸಾರಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದ್ರು, ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಜನ ನಮ್ಮ ಪರವಾಗಿ, ಮೋದಿ ಅವರ ಪರವಾಗಿದ್ದಾರೆ ಎಂದರು.
ಹಿಂದಿನಗಿಂತ ಈ ಬಾರಿ ಹೆಚ್ಚು ಲೀಡ್ದಲ್ಲಿ ಗೆಲ್ಲುವೆ: ಲಿಂಗಾಯತ ಸಮುದಾಯ ಸೇರಿದಂತೆ ಎಲ್ಲ ಸಮುದಾಯದವರು ನನಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿದ್ದಾರೆ. ಯಾವುದೇ ಲಿಂಗಾಯತ ಪ್ಲೇಕಾರ್ಡ್ ಕೆಲಸ ಮಾಡುವುದಿಲ್ಲ. ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಗಳು ಬಿಜೆಪಿಗೆ ಬರಲಿವೆ. ಕಾಂಗ್ರೆಸ್ ಪ್ರತಿಸ್ಪರ್ಧಿಗಿಂತ ಅತ್ಯಧಿಕ ಲೀಡ್ನಿಂದ ಗೆಲುವು ಸಾಧಿಸುವ ವಿಶ್ವಾಸವನ್ನು ಜೋಶಿ ವ್ಯಕ್ತಪಡಿಸಿದರು.
ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮಾತ್ರ ಇವೆ, ಗ್ಯಾರಂಟಿಯೇ ಇಲ್ಲ. ಈ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲದಂತಾಗಿದೆ. ಈ ಚುನಾವಣೆ ಆದ ನಂತರ ಕಾಂಗ್ರೆಸ್ನ ಎಲ್ಲಾ ಗ್ಯಾರಂಟಿಗಳು ಬಂದ್ ಆಗಲಿವೆ. ನಾವು ಭಾರತವನ್ನು ಜಾಗತಿಕವಾಗಿ ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ತರುತ್ತೇವೆ, ಎಲ್ಲರಿಗೂ ಕುಡಿಯುವ ನೀರು, ಆಹಾರ ಭದ್ರತೆ ಕೊಡುವುದು ನಮ್ಮ ಗ್ಯಾರಂಟಿ. ನಾವು ಕೇವಲ ಅಧಿಕಾರಕ್ಕೆ ಬರಲು ಗ್ಯಾರಂಟಿ ಕೊಟ್ಟಿಲ್ಲ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದೇ ನಮ್ಮ ಸರ್ಕಾರದ ಗ್ಯಾರಂಟಿ ಎಂದು ಕೇಂದ್ರದ ಸಾಧನೆಯನ್ನು ಸಚಿವರು ವಿವರಿಸಿದರು.
ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ. ಈ ದೇಶದ ಬಡವರಿಗೆ, ಮಹಿಳೆಯರಿಗೆ, ಯುವಕರಿಗೆ, ಹಿಂದುಳಿದ ವರ್ಗಗಳಿಗೆ ಮೋದಿ ಏನು ಅಭಿವೃದ್ಧಿ ಕೊಡುಗೆ ನೀಡಿದ್ದಾರೆ ಅನ್ನುವುದು ಪ್ರತಿಯೊಬ್ಬ ಮತದಾರರಿಗೂ ಗೊತ್ತಿದೆ ಎಂದು ಹೇಳಿದರು. ಇದೇ ವೇಳೆ ದಿಂಗಾಲೇಶ್ವರ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ಅವರು ನಿರಾಕರಿಸಿದರು.