ರಿಮ್ಸ್ ಆಸ್ಪತ್ರೆಯ ಪ್ರಭಾರ ಎಂಎಸ್ ಡಾ. ಅಮರ್ ವರ್ಮಾ ಪ್ರತಿಕ್ರಿಯೆ ರಾಯಚೂರು:ನಿನ್ನೆ (ಶನಿವಾರ) ಊಟ ಸೇವಿಸಿದ ಒಂದೇ ಕುಟುಂಬದ ಆರು ಸದಸ್ಯರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ರಾಯಚೂರಿನ ವಡ್ಲೂರು ಗ್ರಾಮದಲ್ಲಿ ನಡೆದಿದೆ.
ಕುಟುಂಬದ ಸದಸ್ಯರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಬ್ರಿಕ್ಸ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಊಟ ಮಾಡಿದ್ದಾರೆ. ಬಳಿಕ ಆರು ಜನರಿಗೆ ವಾಂತಿ, ಭೇದಿ ಕಾಣಿಸಿದ್ದರಿಂದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆರು ಜನರ ಪೈಕಿ ಮಗಳು ಆರತಿ (7), ಪ್ರಿಯಾಂಕ (9) ಮೃತಪಟ್ಟಿದ್ದಾರೆ. ತಂದೆ ಮಾರುತಿ, ತಾಯಿ ಹುಸೇನಮ್ಮ, ತಾತ ಲಕ್ಷ್ಮಣ, ಬಾಲಕ ಲಕ್ಕಪ್ಪ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಫುಡ್ ಪಾಯಿಸನ್ ಆಗಿರುವ ಶಂಕೆಯಿದೆ ಎಂದು ರಿಮ್ಸ್ ಆಸ್ಪತ್ರೆಯ ಪ್ರಭಾರ ಎಂಎಸ್ ಡಾ.ಅಮರ್ ವರ್ಮಾ ತಿಳಿಸಿದರು.
ಮಾರುತಿ ಕುಟುಂಬದ ಸದಸ್ಯರು ಲಿಂಗಸೂಗೂರು ಕಮಲದಿನ್ನಿ ಗ್ರಾಮದವರಾಗಿದ್ದಾರೆ. ವಡ್ಲೂರು ಗ್ರಾಮದಲ್ಲಿ ಬ್ರಿಕ್ಸ್ ತಯಾರಿಕೆ ಘಟಕದಲ್ಲಿ ಕೆಲಸ ಮಾಡಲು ಬಂದು, ಇಲ್ಲಿಯೇ ವಾಸವಾಗಿದ್ದಾರೆ. ರಜೆ ನಿಮಿತ್ತ ಪೋಷಕರ ಬಳಿ ಇಬ್ಬರು ಮಕ್ಕಳು ಬಂದಿದ್ದರು. ಕುಟುಂಬದ ಎಲ್ಲಾ ಸದಸ್ಯರು ನಿನ್ನೆ ಮಧ್ಯಾಹ್ನದ ಊಟ ಸೇವಿಸಿದ್ದಾರೆ. ನಂತರ ರಾತ್ರಿ ಊಟಕ್ಕೆ ಚಪಾತಿ, ಹೆಸರು ಕಾಳು ಅನ್ನ, ಸಾಂಬಾರು ಸೇವಿಸಿದ್ದರು. ಊಟದ ಬಳಿಕ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿತ್ತು. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳು ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ಅಮರ್ ವರ್ಮಾ ಹೇಳಿದರು. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದಡಾರ ಪ್ರಕರಣಗಳ ಸಂಖ್ಯೆ ಶೇ 88ರಷ್ಟು ಹೆಚ್ಚಳ: ಲಸಿಕೆ ಪಡೆಯದಿರುವುದೇ ಕಾರಣ! - Global Measles Cases