ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೇಳಿಕೆಗಳು ಗೊಂದಲಕ್ಕೆ ಕಾರಣವಾದ ಬೆನ್ನಲ್ಲೇ ನ್ಯಾಯಾಲಯ ಕಲಾಪದ ಪ್ರಕ್ರಿಯೆಯ ನೇರ ಪ್ರಸಾರದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳು, ವೈಯಕ್ತಿಕ ಖಾತೆಗಳು, ಸಂಕಲನ ಮಾಡುವುದು ಹಾಗೂ ಮರು ಪ್ರಸಾರ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ವಕೀಲರ ಮನವಿ ಆಲಿಸಿದ ಪೀಠವು ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ತಿಳಿಸಿತು.
ಅರ್ಜಿಯಲ್ಲಿ ಏನಿದೆ?:ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಕಾರ್ಪ್ (ಟ್ವಿಟ್ಟರ್) ಮತ್ತು ಇತರೆ ತಾಣಗಳಲ್ಲಿರುವ ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ಮೂಲಕ ಪಡೆದಿರುವ ವಿಡಿಯೋಗಳು, ವಿಡಿಯೋ ಕ್ಲಿಪ್‌ಗಳು ಹಾಗೂ ಸಂಕಲನ ಮಾಡಿರುವ ವಿಡಿಯೋಗಳನ್ನು ತಕ್ಷಣ ತೆರವು ಮಾಡಬೇಕು. ಈ ರೀತಿಯ ವಿಡಿಯೋಗಳನ್ನು ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.