ಬೆಂಗಳೂರು:ರಾಜ್ಯದಲ್ಲಿ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ನಟರಾಜ್ ಶರ್ಮಾ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸಂಜೆ ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ನಟರಾಜ್ ಶರ್ಮಾ ಅವರು ರಾಜ್ಯ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ದೂರು ನೀಡಿ ಮನವಿ ಮಾಡಿದ್ದಾರೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಕೀಲ ನಟರಾಜ್ ಶರ್ಮಾ, "ಎಸ್ಐಟಿ ಅಧಿಕಾರಿಗಳಿಗೆ ರಾಜಕೀಯ ನಾಯಕರಿಂದ ಬೆದರಿಕೆ ಹಾಕುವ ಕೆಲಸ ಆಗುತ್ತಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕು. ಹಿರಿಯ ಅಧಿಕಾರಿಗಳ ರಕ್ಷಣೆಗೆ ಕಾಯ್ದೆ ತರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೇನೆ". ಇದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಮುಖ್ಯಕಾರ್ಯದರ್ಶಿಗಳು ಭರವಸೆ ಕೊಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.
ಯತೋ ಧರ್ಮಸ್ತತೋ ಜಯಃ-ಎಡಿಜಿಪಿ ಚಂದ್ರಶೇಖರ್:ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಚಂದ್ರಶೇಖರ್ ನಡುವಿನ ಸಮರ ಮುಂದುವರಿದಿದ್ದು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಚಂದ್ರಶೇಖರ್ ಭೇಟಿ ಮಾಡಿ ಅಗತ್ಯ ಮಾಹಿತಿ ನೀಡಿದ್ದಾರೆ.