ಬೆಂಗಳೂರು:ವಿದ್ಯುತ್ ಬಿಲ್ನಲ್ಲಿನ ಹೆಚ್ಚುವರಿ ಭದ್ರತಾ ಠೇವಣಿಯ ಕುರಿತು ಗ್ರಾಹಕರ ಗೊಂದಲಕ್ಕೆ ಬೆಸ್ಕಾಂ ಸ್ಪಷ್ಟನೆ ಕೊಟ್ಟಿದೆ. ನೂತನ ಗ್ರಾಹಕರ ವಿದ್ಯುತ್ ಬೇಡಿಕೆಯನ್ನು ಆಧರಿಸಿ, ಹೆಚ್ಚುವರಿ ಭದ್ರತಾ ಠೇವಣಿಯನ್ನು ನಿರ್ಧರಿಸಲಾಗುತ್ತದೆ. ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಗ್ರಾಹಕರ ಹಿಂದಿನ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ, ಗ್ರಾಹಕರು ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಾವತಿಸಬೇಕೇ ಅಥವಾ ಅವರ ಬೇಡಿಕೆ ಕಡಿಮೆಯಿದ್ದಲ್ಲಿ ಗ್ರಾಹಕರಿಗೆ ಮರುಪಾವತಿಸಬೇಕೇ ಎನ್ನುವುದನ್ನು ಬೆಸ್ಕಾಂ ನಿರ್ಧರಿಸುತ್ತದೆ ಎಂದು ತಿಳಿಸಿದೆ.
ಹೆಚ್ಚುವರಿ ಭದ್ರತಾ ಠೇವಣಿಗೆ ನೂತನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದಲ್ಲಿ ಠೇವಣಿಯ ಮೇಲಿನ ಬಡ್ಡಿಯನ್ನು ಗ್ರಾಹಕರ ಖಾತೆಗೆ ಪಾವತಿಸಲಾಗುತ್ತದೆ. ಪ್ರಸ್ತುತ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರಿಗೆ ಅವರ ಖಾತೆಯಲ್ಲೇ ಭದ್ರತಾ ಠೇವಣಿಯ ಬಡ್ಡಿ ಹಣ ಜಮಾ ಆಗಿರುತ್ತದೆ. ಶೂನ್ಯ ಬಿಲ್‌ನಿಂದ ಹೊರಬಂದಾಗ ಅವರ ಖಾತೆಯಲ್ಲಿ ಜಮೆಯಾಗಿರುವ ಬಡ್ಡಿಯ ಹಣವನ್ನು ವಿದ್ಯುತ್ ಶುಲ್ಕದೊಂದಿಗೆ ಹೊಂದಿಸಲಾಗುತ್ತದೆ. ಹೆಚ್ಚುವರಿ ಭದ್ರತಾ ಠೇವಣಿ ಯಾವುದೇ ರೀತಿಯ ತೆರಿಗೆ ಅಥವಾ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುವ ಮೊತ್ತವಲ್ಲ. ಬದಲಾಗಿ, ಗ್ರಾಹಕರ ವಿದ್ಯುತ್ ಬಳಕೆಗೆ ಅನುಗುಣವಾಗಿ, ಅವರ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ, ನಿರ್ಧರಿಸಲಾಗುವ ಭದ್ರತಾ ಠೇವಣಿ. ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೆ ಬಡ್ಡಿಯ ಲಾಭಾಂಶ ನೀಡಲಾಗುತ್ತದೆ.
ಜೂನ್ ತಿಂಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್ ಬಿಲ್ ಬರುವ ಯಾವುದೇ ಕಾರಣಗಳು ಇಲ್ಲ. ವಿದ್ಯುತ್ ಬಿಲ್ ಗೃಹಜ್ಯೋತಿಯಡಿ ಶೂನ್ಯ. ನಿಮ್ಮ ವಿದ್ಯುತ್ ಬಿಲ್‌ನಲ್ಲಿ ಋಣಾತ್ಮಕ ಮೊತ್ತ ನಮೂದಾಗಿದ್ದರೆ, ಅದು ಜೂನ್ ತಿಂಗಳ ಅಂತ್ಯದಲ್ಲಿ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಗೆ ನೀಡುವ ಬಡ್ಡಿದರವಾಗಿದೆ. ಅದನ್ನು ಮುಂದೆ ಶೂನ್ಯ ಬಿಲ್‌ನಿಂದ ಹೊರಬಂದಾಗ, ವಿದ್ಯುತ್ ಶುಲ್ಕಕ್ಕೆ ಸರಿಹೊಂದಿಸಲಾಗುವುದು. ಈ ಋಣಾತ್ಮಕ ಮೊತ್ತವನ್ನು ಗ್ರಾಹಕರು ಪಾವತಿಸಬೇಕಿರುವುದಿಲ್ಲ.