ಹುಬ್ಬಳ್ಳಿ:ದಸರಾ ಹಬ್ಬ ಹಾಗೂ ಸರಣಿ ರಜೆ ಮುಗಿಸಿ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಯಿತು.
ಅಕ್ಟೋಬರ್ 11ರಂದು ಶುಕ್ರವಾರ ಮಹಾನವಮಿ - ಆಯುಧಪೂಜೆ, 12ರಂದು ಶನಿವಾರ ವಿಜಯದಶಮಿ ಹಾಗೂ 13ರಂದು ಭಾನುವಾರದ ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ನೌಕರರು ಸೇರಿದಂತೆ ದೂರದ ಊರುಗಳಲ್ಲಿ ನೆಲೆಸಿರುವ ಹಲವರು ಸ್ವಂತ ಊರುಗಳಿಗೆ ಆಗಮಿಸಿದ್ದರು. ಹೀಗಾಗಿ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟವಿತ್ತು. ಅದಕ್ಕೆ ತಕ್ಕಂತೆ ಬೆಂಗಳೂರು, ಮತ್ತಿತರ ಸ್ಥಳಗಳಿಂದ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
ರಜೆ ಮುಗಿಸಿಕೊಂಡು ತಮ್ಮ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರ ಪ್ರಯಾಣಿಕರಿಂದಾಗಿ ಅ.13ರಂದು ಭಾನುವಾರ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ, ನವಲಗುಂದ, ಕಲಘಟಗಿ ಬಸ್ ನಿಲ್ದಾಣಗಳಿಂದ ಮಧ್ಯಾಹ್ನದಿಂದಲೇ ನೆರೆಯ ಜಿಲ್ಲೆಗಳು ಹಾಗೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಸೇರಿದಂತೆ ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಗದಗ,ಬೆಳಗಾವಿ ಕಡೆಗೆ ಹೆಚ್ಚಿನ ಜನರು ಪ್ರಯಾಣ ಮಾಡಿರುವುದು ಕಂಡುಬಂತು.