ದಾವಣಗೆರೆ: ನಟ ವಿನಯ್ ರಾಜ್ಕುಮಾರ್ ಅವರು ತಮ್ಮ ಹೊಸ ಸಿನಿಮಾದ ಪ್ರಚಾರಕ್ಕೆ ಇಂದು ದಾವಣಗೆರೆಗೆ ಆಗಮಿಸಿದ್ದರು. ಅವರನ್ನು ದೊಡ್ಮನೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಖಾಸಗಿ ಬಟ್ಟೆ ಅಂಗಡಿಯೊಂದಕ್ಕೆ ಭೇಟಿ ನೀಡಿದ ವಿನಯ್ ರಾಜ್ಕುಮಾರ್ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳ ಹಾಡುಗಳನ್ನು ಹಾಕಿ ಬರಮಾಡಿಕೊಳ್ಳಲಾಯಿತು. ಈ ವೇಳೆ, ಅಭಿಮಾನಿಗಳು ಬೃಹತ್ ಹೂವಿನ ಹಾರ ಹಾಕಿ, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ನಟ ವಿನಯ್ ರಾಜ್ಕುಮಾರ್ ಮಾತನಾಡಿ, "ಮೂರು ವರ್ಷಗಳ ಬಳಿಕ ಹೊಸ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದ ಪ್ರಮೋಷನ್ಗಾಗಿ ಇಂದು ದಾವಣಗೆರೆಗೆ ಆಗಮಿಸಿದ್ದೇವೆ. ಮೊದಲು ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಗೆ ಹೂವಿನ ಮಾಲೆ ಹಾಕಿ ದುರ್ಗಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆವು. ದಾವಣಗೆರೆಗೆ ಬಂದಿರುವುದು ಸಂತಸ ತಂದಿದೆ. ಫೆ.8 ರಂದು ನನ್ನ ಒಂದು ಸರಳ ಪ್ರೇಮಕಥೆ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರ ಲವ್ ಕಮ್ ಕಾಮಿಡಿ ಸ್ಟೋರಿಯಾಗಿದೆ. ನನಗೆ ಬಭ್ರುವಾಹನ ಸಿನಿಮಾ ತುಂಬಾ ಇಷ್ಟ, ಈ ಸಿನಿಮಾವನ್ನು ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ. ಇದು ನನ್ನ ನಾಲ್ಕನೇ ಸಿನಿಮಾ ಎಲ್ಲರು ಆಶೀರ್ವಾದ ಮಾಡಿ" ಎಂದರು.