ಬೆಂಗಳೂರು:ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಎರಡನೇ ಆರೋಪಿ ನಟ ದರ್ಶನ್ ಇಂದು ನಗರದ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ದಾಖಲಾತಿಗಳಿಗೆ ಸಹಿ ಹಾಕಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಶುಕ್ರವಾರ ಹೈಕೋರ್ಟ್, ದರ್ಶನ್ ಸೇರಿ 7 ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು. ಇಬ್ಬರ ಶ್ಯೂರಿಟಿ, ಒಂದು ಲಕ್ಷ ಬಾಂಡ್, ಸಾಕ್ಷಿ ನಾಶಪಡಿಸಕೂಡದೆಂದು ನ್ಯಾಯಾಲಯ ಷರತ್ತು ವಿಧಿಸಿತ್ತು.
ಕೋರ್ಟ್‌ನಿಂದ ಆಸ್ಪತ್ರೆಗೆ ತೆರಳಿದ ದರ್ಶನ್: ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾದ ದರ್ಶನ್ ಜಾಮೀನು ಷರತ್ತುಗಳನ್ನು ಪೊರೈಸಿದ್ದಾರೆ. ಬಳಿಕ ಬಿಜಿಎಸ್ ಆಸ್ಪತ್ರೆಗೆ ತೆರಳಿದರು.
ಪಾಸ್‌ಪೋರ್ಟ್ ವಾಪಸ್ ನೀಡಲು ಕೋರ್ಟ್ ಅನುಮತಿ: ದರ್ಶನ್ ಪರವಾಗಿ ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಶ್ಯೂರಿಟಿ ನೀಡಿದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕೋರ್ಟ್ನ ಕಟಕಟೆಯನ್ನು ಹಿಡಿದು ನ್ಯಾಯಾಧೀಶರಿಗೆ ಕೈ ಮುಗಿದು ಒಂದು ಲಕ್ಷ ರೂ ಮೌಲ್ಯದ ವೈಯಕ್ತಿಕ ಬಾಂಡ್ಗೆ ಸಹಿ ಹಾಕಿ, ಕುಂಟುತ್ತಲೇ ಕೋರ್ಟ್‌ನಿಂದ ನಿರ್ಗಮಿಸಿದರು. ಇದೇ ವೇಳೆ ಮುಟ್ಟುಗೋಲು ಹಾಕಿಕೊಂಡಿದ್ದ ದರ್ಶನ್ ಪಾಸ್‌ಪೋರ್ಟ್ ವಾಪಸ್ ನೀಡಲು ನ್ಯಾಯಾಲಯ ಸಮ್ಮತಿಸಿತು.
ಜಾಮೀನು ಮಂಜೂರಾದ ಏಳು ಆರೋಪಿಗಳ ಪೈಕಿ ಐವರು ಮಾತ್ರ ಜಾಮೀನು ಷರತ್ತುಗಳನ್ನು ಪೂರೈಸಿದ್ದಾರೆ. ದರ್ಶನ್, ಪವಿತ್ರಾಗೌಡ, ಪ್ರದೂಶ್ ಸೇರಿ ಐವರು ಶ್ಯೂರಿಟಿ ಒದಗಿಸಿದ್ದಾರೆ. ಜಗದೀಶ್ ಹಾಗೂ ಅನುಕುಮಾರ್ ಅವರಿಗೆ ಯಾರೂ ಸಹ ಜಾಮೀನುದಾರರಾಗಿ ಮುಂದೆ ಬರದ ಕಾರಣ ಇಂದು ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಪವಿತ್ರಾಗೌಡ ಇನ್ನಿತರ ಆರೋಪಿಗಳಿಗೆ ಜಾಮೀನು: ಇಂದು ಸಂಜೆಯೊಳಗೆ ಬಿಡುಗಡೆ ಸಾಧ್ಯತೆ - MURDER OF RENUKASWAMY