ಬೆಂಗಳೂರು: ಕಾವೇರಿ ನದಿಯ ಉಪನದಿ ಅರ್ಕಾವತಿ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಪ್ರಮುಖ ನದಿಯಾಗಿರುವ ಅರ್ಕಾವತಿ ಈಗ ವಿಷವಾಗಿ ಮಾರ್ಪಡುತ್ತಿದೆ. ದೊಡ್ಡಬಳ್ಳಾಪುರ ನಗರದ ಚರಂಡಿ ನೀರು ಮತ್ತು ಸುತ್ತಮುತ್ತಲಿನ ಕೈಗಾರಿಕಾ ತ್ಯಾಜ್ಯದ ನೀರು ಹೆಸರಘಟ್ಟ ಕೆರೆಯೊಡಲು ಸೇರುತ್ತಿದೆ. ಇದೇ ಹೆಸರಘಟ್ಟ ಕೆರೆ ನೀರು ಬೆಂಗಳೂರಿನ ಜನರಿಗೆ ಪೂರೈಕೆಯಾಗುತ್ತಿರುವ ವಿಚಾರ ಹರಿದಾಡುತ್ತಿದ್ದು, ರೈತ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಕೆರೆ ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಕೆರೆ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸಲು 1890ರಲ್ಲಿ ಜೀರ್ಣೋದ್ಧಾರ ಮಾಡಿ ಮೈಸೂರಿನ ದಿವಾನರು ಬಳಸಿಕೊಳ್ಳುತ್ತಿದ್ದರು. ಇದು 1960-70ರ ದಶಕದಲ್ಲಿ ಬೆಂಗಳೂರಿನ 10 ಲಕ್ಷ ಜನರ ಕುಡಿಯುವ ನೀರಿನ ಮೂಲವಾಗಿತ್ತು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ತಿಳಿಸಿದರು.
ಹೆಸರಘಟ್ಟ ಕೆರೆಯನ್ನು ನಾವು ಖಾಲಿ ಮಾಡುತ್ತೇವೆ. ಬೆಂಗಳೂರಿಗೆ ನೀರು ಕೊಡುತ್ತೇವೆ ಎಂದು ಘೋಷಣೆಯಾಯ್ತು. ಇಲ್ಲಿನ ಜನರಿಗೆ ಭಯವಾಯ್ತು. ಇಂದಿನ ದಿನಗಳಲ್ಲಿ ಕುಡಿಯಲು ಜನರಿಗೆ ಮಾತ್ರವಲ್ಲ ಪಕ್ಷಿಗಳಿಗೂ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ನೀರನ್ನು ಬೇರೆ ಕಡೆ ತೆಗೆದುಕೊಂಡು ಹೋಗುತ್ತಾರಲ್ಲ, ಮುಂದೆ ಹೆಂಗೆ ಅಂತಾ ನಾನು ಪರಿಶೀಲನೆಗೆ ಬಂದೆ. ಆದ್ರೆ ಇಲ್ಲಿ ಬಂದು ನೋಡಿದಾಗ ಈ ನೀರು ಸಹ ವಿಷವಾಗಿ ಮಾರ್ಪಡುತ್ತಿರುವುದು ಗೊತ್ತಾಯಿತು. ಏಕೆಂದರೆ ಕೆರೆ ಸುತ್ತಮುತ್ತಲಿನ ನಗರಗಳಲ್ಲಿರುವ ಕಾರ್ಖನೆ ತ್ಯಾಜ್ಯದ ನೀರು ಮತ್ತು ಚರಂಡಿ ನೀರು ಕೆರೆ ಸೇರುತ್ತಿದೆ. ಈ ವಿಷಕಾರಿ ನೀರನ್ನು ಬೆಂಗಳೂರಿನ ಜನರಿಗೆ ಕುಡಿಸಲು ಹೋಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ಅವರು ಹರಿಹಾಯ್ದರು.
ಕೆರೆ ಸುತ್ತಮುತ್ತಲಿನ ಪ್ರದೇಶ ತ್ಯಾಜ್ಯದಿಂದ ತುಂಬಿತ್ತು. ಯಾವುದೇ ರಾಜಕಾರಣಿಗಳು ಬಂದು ಇಲ್ಲಿ ಸ್ವಚ್ಛಗೊಳಿಸಲಿಲ್ಲ. ನಮ್ಮ ಹೋರಾಟಗಾರರು ಈ ಸ್ಥಳವನ್ನು ಸ್ವಚ್ಛ ಮಾಡಿದ್ದಾರೆ. ನಾವು ಬೆಂಗಳೂರಿಗೆ ನೀರು ಕೊಡಲು ಸಿದ್ಧರಿದ್ದೇವೆ. ಆದ್ರೆ ನಮ್ಮ ಬೆಂಗಳೂರು ಜನ ಸ್ವಚ್ಛತೆ ನೀರು ಕುಡಿಯಬೇಕು. ಹೀಗಾಗಿ ಎಲ್ಲ ಶಾಸಕರು ಕೆರೆ ನೀರು ಉಳಿಸಿ. ಈ ಕೆರೆಗೆ ಹೇಮಾವತಿ ಮತ್ತು ಕೆಆರ್ಎಸ್ ನೀರನ್ನು ಡಂಪ್ ಮಾಡಿ. ಈ ಕೆರೆಯಲ್ಲಿ ನೀರನ್ನು ಸಂಗ್ರಹ ಮಾಡಿಕೊಳ್ಳಿ. ಇಲ್ಲಿಂದ ನೇರ ಇಡೀ ಬೆಂಗಳೂರಿಗೆ ನೀರು ಕೊಡಿ. ಹೋರಾಟಗಾರರು ನಾವೆಲ್ಲರೂ ಸಂತೋಷಪಡುತ್ತೇವೆ ಎಂದು ಮಂಜೇಗೌಡ ಆಗ್ರಹಿಸಿದರು.