ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮಾಹಿತಿ ನೀಡಿದರು. ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗುವ ಬಸ್‌ಗಳಿಂದ ಆಗುವ ಆರ್ಥಿಕ ಹೊರೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅವುಗಳ ಬಣ್ಣ ಬದಲಾಯಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಹೊಸದಾಗಿ ಸೇರ್ಪಡೆಯಾಗುವ ಬಸ್‌ಗಳು ಕೆಂಪು ಬಣ್ಣದಿಂದ ಕೂಡಿರುತ್ತಿವೆ. ಹಸಿರು ಬಣ್ಣದ ಬಸ್‌ಗಳು ನಿಧಾನಕ್ಕೆ ತೆರೆಮರೆಗೆ ಸರಿಯಲಿವೆ.
ಸದ್ಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಮೊದಲ ಹಂತದಲ್ಲಿ 40 ಬಸ್‌ಗಳು ಬಂದಿದ್ದು, ಇವೆಲ್ಲವೂ ಕೆಂಪು - ಸಿಲ್ವರ್ ಕಲರ್ ಹೊಂದಿವೆ. ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುವ 375 ಬಸ್‌ಗಳು ಸಹ ಇದೇ ಮಾದರಿಯ ಬಣ್ಣದ್ದಾಗಿರುತ್ತವೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಕಳೆದ 25 - 26 ವರ್ಷಗಳಿಂದ ಹಸಿರು ಬಣ್ಣದ ಬಸ್‌ಗಳು ಸಂಚರಿಸುತ್ತಿವೆ. ಇವುಗಳು ಗುಜರಿಗೆ ಹೋಗುವರೆಗೂ ಇದೇ ಬಣ್ಣ ಹೊಂದಿರುತ್ತವೆ. ಹೊಸ ಬಸ್‌ಗಳು ಮಾತ್ರ ಕೆಂಪು ಬಣ್ಣದ್ದಾಗಿರುತ್ತವೆ. ಹಸಿರು ಬಣ್ಣದ ಬಸ್‌ಗಳು ನಿಧಾನಕ್ಕೆ ತೆರೆಮರೆಗೆ ಸರಿಯಲಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಾರಿಗೆ ಸಂಸ್ಥೆಗೆ 50 ಲಕ್ಷ ರೂಪಾಯಿ ಉಳಿತಾಯ:ಹಸಿರು ಸೇರಿದಂತೆ ನಾಲ್ಕು ಬಗೆಯ ಬಣ್ಣ ಬಳಿಯುವುದರಿಂದ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳಲಿದೆ. ಇದಲ್ಲದೇ ಬಸ್‌ಗಳಿಗೆ ಈ ನಾಲ್ಕು ಬಣ್ಣದ ವಿನ್ಯಾಸ ರೂಪಿಸುವುದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ. ಆದರೆ, ಇದೀಗ ಹೊಸ ಬಸ್‌ಗಳು ಕೆಂಪು-ಸಿಲ್ವರ್ ಬಣ್ಣ ಒಳಗೊಳ್ಳುವುದರಿಂದ ಸಂಸ್ಥೆಗೆ ಕನಿಷ್ಠ 50 ಲಕ್ಷ ರೂ. ಉಳಿತಾಯವಾಗಲಿದೆ. ಜೊತೆಗೆ ಎರಡು ಬಣ್ಣದ ವಿನ್ಯಾಸ ರೂಪಿಸಲು ಅತ್ಯಂತ ಕಡಿಮೆ ವೇಳೆ ತೆಗೆದುಕೊಳ್ಳುತ್ತದೆ. ಹಾಗಾಗಿ ಬಣ್ಣ ಬದಲಾಯಿಸಲಾಗಿದೆ. ಇದರಿಂದ ಸಂಸ್ಥೆಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ಈ ಬಾರಿ ಬಜೆಟ್ ತಯಾರಿ ಮಧ್ಯೆ ಎದುರಾಗಿರುವ ಸವಾಲುಗಳೇನು?