ಬೆಂಗಳೂರು: ಯುವಕನ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಆ್ಯಸಿಡ್ ಅಂಶಗಳುಳ್ಳ ಬಾತ್ ರೂಮ್ ಕ್ಲೀನರ್ ಎರಚಿರುವ ಘಟನೆ ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸಣ್ಣಕ್ಕಿ ಬಯಲಿನ ಬಾಲಾಜಿ ವೈನ್ಸ್ ಸ್ಟೋರ್ ಬಳಿ ನಡೆದಿದೆ. ಆ್ಯಸಿಡ್ ದಾಳಿಯಿಂದ ನಾಗೇಶ್ ಕೊಂಡಾ (21) ಎಂಬವರ ಮುಖಕ್ಕೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.
ವೃಷಭಾವತಿ ನಗರದಲ್ಲಿರುವ ಇಂಡಸ್ಟ್ರೀಸ್ ಕಂಪನಿಯೊಂದರಲ್ಲಿ ಫಿಟ್ಟರ್ ಆಗಿ ನಾಗೇಶ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಬಾರ್ಗೆ ಬಂದು ಮದ್ಯಪಾನ ಮಾಡಿ, ಊಟ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ಬಾರ್ ಬಳಿ ಬಂದ ದುಷ್ಕರ್ಮಿ ನಾಗೇಶ್ ಮುಖಕ್ಕೆ ಕೆಮಿಕಲ್ ಎರಚಿ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.