ಬೆಂಗಳೂರು:ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ತಾನೊಬ್ಬ ಕಸ್ಟಮ್ಸ್ ಅಧಿಕಾರಿ ಎಂದು ಮಹಿಳೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ರಾಜ್ಯ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನರೇಶ್ ಪುರಿ ಗೋಸ್ವಾಮಿ (45) ಎಂದು ಗುರುತಿಸಲಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪವನ್ ಅಗರ್‌ವಾಲ್ ಹೆಸರಿನ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ ಆರೋಪಿ, ಕೊಯಮತ್ತೂರು ಮೂಲದ ವಿಚ್ಛೇದಿತ ಮಹಿಳೆಯೊಬ್ಬರಿಗೆ ತಾನೊಬ್ಬ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ಬಳಿಕ ವಿವಾಹದ ಮಾತುಕತೆಗಾಗಿ ಜನವರಿ 14ರಂದು ಆಕೆಯ ಪೋಷಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಆರೋಪಿಯ ಮಾತಿನಂತೆ ಬೆಂಗಳೂರಿಗೆ ಬಂದಿದ್ದ ಮಹಿಳೆಯ ಪೋಷಕರಿಗೆ ಕರೆ ಮಾಡಿ, 'ನನ್ನ ಚಿಕ್ಕಪ್ಪ ನಿಮ್ಮನ್ನು ರಿಸೀವ್ ಮಾಡಿಕೊಳ್ಳುತ್ತಾರೆ' ಅಂತಾ ತಿಳಿಸಿ ಮತ್ತೋರ್ವನನ್ನು ಕಳಿಸಿದ್ದ. ನಂತರ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿದೆ, ಪರ್ಸ್ ಅನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದೇನೆ. ಮನೆಗೆ ಬಂದ ಮೇಲೆ ಹಣ ವಾಪಸ್ ನೀಡುವುದಾಗಿ ನಂಬಿಸಿ ಅವರಿಂದಲೇ 10 ಸಾವಿರ ರೂ. ಪಡೆದಿದ್ದನು. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಿಕೊಂಡು ಬಂದುಬಿಡುತ್ತೇನೆಂದು ಹೇಳಿ ಫೋನ್ ಸ್ವಿಚ್ಡ್ ಆಫ್ ಮಾಡಿ ಅಲ್ಲಿಂದ ನಾಪತ್ತೆಯಾಗಿದ್ದ. ಆರೋಪಿಯ ವಂಚನೆಯ ಕುರಿತು ಮಹಿಳೆಯ ಪೋಷಕರು ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದರಂತೆ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯು ಕಾಟನ್‌ಪೇಟೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಿ-ಆ್ಯಕ್ಟಿವ್ ಆದ ಸಿಮ್ ಕಾರ್ಡುಗಳನ್ನು ಬ್ಲಾಕ್‌ನಲ್ಲಿ ಖರೀದಿಸಿ ಹಿಂದಿ ಪತ್ರಿಕೆಗಳ ಜಾಹೀರಾತಿನಲ್ಲಿ ಬರುವ ವಧು-ವರರ ಮೊಬೈಲ್ ನಂಬರ್‌ಗೆ ಫೋನ್ ಮಾಡಿ ಮಾತನಾಡುತ್ತಿದ್ದನು. ತಾನು ಪವನ್ ಅಗರ್‌ವಾಲ್ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿ ಎಂದು ನಕಲಿ ಬಯೋಡೇಟಾ ಹಾಗೂ ನಕಲಿ ಭಾವಚಿತ್ರವನ್ನು ಕಳುಹಿಸುತ್ತಿದ್ದ.