ಧಾರವಾಡ: ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಫಯಾಜ್ ಎಂಬ ಯುವಕ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಕೊಲೆಯಾದ ನೇಹಾ ತಂದೆ ನಿರಂಜನಯ್ಯ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಗಲ್ಲಿಗೇರಿಸಿದರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದೆ. ಮತ್ತೊಂದು ಕಡೆ ಗೃಹ ಸಚಿವರು, ತಮ್ಮ ಹೇಳಿಕೆಯಿಂದ ನೇಹಾ ತಂದೆ ತಾಯಿಯ ಮನಸ್ಸಿಗೆ ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಜನರ ಕ್ಷಮೆ ಕೋರಿದ ಫಯಾಜ್ ತಾಯಿ: ಇನ್ನೊಂದು ಕಡೆ, ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ನನ್ನ ಮಗ ಮಾಡಿದ ತಪ್ಪಿಗೆ ನಾನು ಕರ್ನಾಟಕದ ಸಮಸ್ತ ಜನತೆಗೆ ಮತ್ತು ನೇಹಾಳ ತಂದೆ, ತಾಯಿಗೂ ಕ್ಷಮೆಯಾಚಿಸುತ್ತೇನೆ. ನೇಹಾಳ ಪೋಷಕರಿಗೆ ಆದಷ್ಟೇ ನೋವು ನನಗೂ ಆಗಿದೆ‘‘ ಎಂದಿದ್ದಾರೆ.
"ಅವಳೂ ನನ್ನ ಮಗಳು ಇದ್ದಹಾಗೆ. ನನ್ನ ಮಗ ಮಾಡಿದ್ದು ತಪ್ಪು. ಫಯಾಜ್ ಐಎಎಸ್ ಅಧಿಕಾರಿ ಆಗಬೇಕೆಂದು ನಾನು ಕನಸುಕಂಡಿದ್ದೆ, ಆದರೇ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತಿದೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಶಿಕ್ಷಕಿಯಾಗಿ ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡ್ತೀನಿ. ಕಾನೂನಿನ ಪ್ರಕಾರ ಆತ ಮಾಡಿದ ತಪ್ಪಿಗೆ ಈ ನೆಲದ ಕಾನೂನಿನಂತೆ ಸರಿಯಾದ ಶಿಕ್ಷೆಯಾಗಲಿ" ಎಂದು ಮಾಧ್ಯಮಗಳ ಮುಂದೆ ದುಃಖ ಭರಿತರಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.