ಬೆಂಗಳೂರು:ರಸ್ತೆಯಲ್ಲಿ ನಿಂತಿದ್ದ ದಂಪತಿಗೆ ರಂಜಾನ್ ಹಬ್ಬದ ಪ್ರಯುಕ್ತ ರೇಷನ್ ಕಿಟ್ ಕೊಡಿಸುವುದಾಗಿ ನಂಬಿಸಿ ಚಿನ್ನಾಭರಣ ಹಾಗೂ ನಗದು ಹಣ ದೋಚಿದ್ದ ಆರೋಪಿಯನ್ನು ಇಲ್ಲಿನ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಖಿಲಾ ಹಾಗೂ ರಶೀದ್ ಎಂಬ ದಂಪತಿಯನ್ನು ದೋಚಿದ್ದ ಅಬ್ದುಲ್ಲಾ ಎಂಬಾತನನ್ನು ಬಂಧಿಸಲಾಗಿದೆ.
ಮಾರ್ಚ್ 26 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆನೆಪಾಳ್ಯದ 4 ನೇ ಕ್ರಾಸ್ ಬಳಿ ನಿಂತಿದ್ದ ದಂಪತಿ ಬಳಿ ಬಂದಿದ್ದ ಅಬ್ದುಲ್ಲಾ, 'ನೀವಿನ್ನೂ ರಂಜಾನ್ ರೇಷನ್ ಕಿಟ್ ತಗೊಂಡಿಲ್ವಾ?' ಅಂತ ಕೇಳಿದ್ದ. ಇಲ್ಲ ಎಂದು ದಂಪತಿ ಉತ್ತರಿಸಿದಾಗ, 'ಬನ್ನಿ ಕಿಟ್ ಕೊಡಿಸುತ್ತೇನೆ' ಎಂದು ರಶೀದ್ ಅವರನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದ. ಬಳಿಕ ಸೀದಾ ಜನನಿಬಿಡ ಸ್ಥಳದ ಬಳಿ ಕರೆದುಕೊಂಡು ಹೋಗಿ, ಚಾಕು ತೋರಿಸಿ ರಶೀದ್ ಜೇಬಿನಲ್ಲಿದ್ದ ಸುಮಾರು ಐದು ಸಾವಿರ ರೂ. ಹಣ ಪಡೆದು ಕಾಲ್ಕಿತ್ತಿದ್ದ.
ಬಳಿಕ ನೇರವಾಗಿ ಆತನ ಪತ್ನಿಯ ಬಳಿ ಬಂದಿದ್ದ ಅಬ್ದುಲ್ಲಾ, 'ನಿಮ್ಮ ಪತಿ ಒಬ್ಬರಿಂದಲೇ ರೇಷನ್ ಕಿಟ್ ತರಲು ಸಾಧ್ಯವಿಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದೇನೆ' ಎಂದು ಅಖಿಲಾರನ್ನ ತನ್ನ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದ. ಬಳಿಕ ಅವರನ್ನು ಸುಬ್ಬಣ್ಣ ಗಾರ್ಡನ್ ಬಳಿ ಕರೆದೊಯ್ದು, ಚಾಕು ತೋರಿಸಿ ಆಕೆಯ ಬಳಿಯಿದ್ದ 14 ಗ್ರಾಂ ತೂಕದ ಚಿನ್ನದ ಸರ, 7 ಗ್ರಾಂ ತೂಕದ ಕಿವಿಯೋಲೆ, 400 ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದ. ಬಳಿಕ ದಂಪತಿ ಭೇಟಿಯಾದಾಗ ಇಬ್ಬರೂ ಮೋಸ ಹೋಗಿರುವುದು ತಿಳಿದು ಬಂದಿತ್ತು. ಬಳಿಕ ಈ ಬಗ್ಗೆ ದಂಪತಿಯು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಎಂಟಕ್ಕೂ ಅಧಿಕ ಕೃತ್ಯಗಳನ್ನು ಎಸಗಿದ್ದ ಆರೋಪಿ, ತಿಲಕ್ನಗರ ಪೊಲೀಸರಿಂದ ಬಂಧಿತನಾಗಿದ್ದ. ಕೃತ್ಯಕ್ಕೂ ಹಿಂದಿನ ದಿನವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಮತ್ತೊಮ್ಮೆ ಅಂತಹದ್ದೇ ಕೃತ್ಯ ಎಸಗಿದ್ದಾನೆ. ಆರೋಪಿಯಿಂದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ಹಾಗೂ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೆಪಿಎಸ್ಸಿ ಸದಸ್ಯತ್ವದ ಆಮಿಷ: ಸಿಎಂ, ರಾಜ್ಯಪಾಲರ ಹೆಸರಲ್ಲಿ ನಕಲಿ ಆದೇಶ ಸೃಷ್ಟಿಸಿ ₹4 ಕೋಟಿ ವಂಚನೆ