ಗಂಗಾವತಿ(ಕೊಪ್ಪಳ): ನಗರದಲ್ಲಿ 2010ರಲ್ಲಿ ನಡೆದಿದ್ದ ಅಪರಾಧ ಪ್ರಕರಣವೊಂದರಲ್ಲಿ ಬಂಧಿಯಾಗಿದ್ದ ಆರೋಪಿ, ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿ ಇದೀಗ ಹದಿನಾಲ್ಕು ವರ್ಷಗಳ ಬಳಿಕ ಸೆರೆ ಸಿಕ್ಕಿದ್ದಾನೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯ ಬರಿಸ್ತಾದ ಅಬೀದಖಾನ್ ಅಲಿಯಾಸ್ ಸಲ್ಮಾನ್ ಖಾನ್ ಉರುಫ್ ಅವೀದ್ ಮುರಖಾನ್ ಎಂದು ಗುರುತಿಸಲಾಗಿದೆ. ಗಂಗಾವತಿಯಲ್ಲಿ 2010ರಲ್ಲಿ ಬ್ಯಾಂಕ್ವೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಈತ ಜೈಲು ಪಾಲಾಗಿದ್ದ. ಆರೋಪಿಯನ್ನು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡಿದ್ದ. ಪೊಲೀಸರು ಈತನಿಗಾಗಿ ಸಾಕಷ್ಟು ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರ ಮಾಹಿತಿ ಸಿಕ್ಕಿತ್ತು.
ಅಪರಾಧ ಚಟುವಟಿಕೆ ಹಿನ್ನೆಲೆ ಹೊಂದಿರುವ ಆರೋಪಿ, ಉತ್ತರ ಪ್ರದೇಶದ ಬದ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ರಾಯ್ ಬರೇಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರುವುದನ್ನು ಗಂಗಾವತಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆಯಲು ನ್ಯಾಯಾಲಯದ ಮೂಲಕ ಬಾಡಿ ವಾರಂಟ್ ಪಡೆದ ಪೊಲೀಸರು, ರಾಯ್ ಬರೇಲಿ ಕಾರಾಗೃಹಕ್ಕೆ ತೆರಳಿ ಅಗತ್ಯ ಕಾನೂನು ಪ್ರಕ್ರಿಯೆ ಜರುಗಿಸಿ, ಗಂಗಾವತಿಗೆ ಕರೆದುಕೊಂಡು ಬಂದಿದ್ದಾರೆ. ಆರೋಪಿ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಹೇಮಂತ ಕುಮಾರ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಸಲಹೆ ಮೇರೆಗೆ ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ್ ಮಾಳೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಸುಳ್ಯ: ಆರೋಗ್ಯ ತಪಾಸಣೆಗೆ ಕರೆತಂದ ಆರೋಪಿ ಪರಾರಿ; ಮಾಹಿತಿ ನೀಡುವಂತೆ ಪೊಲೀಸರ ಮನವಿ