ವಿಜಯಪುರ:ಎರಡುಕೆಎಸ್ಆರ್ಟಿಸಿ ಬಸ್‌ಗಳ ಮಧ್ಯೆ ಅಪಘಾತ ಸಂಭವಿಸಿ ನಲವತ್ತಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಲ್ಲಿಯ ಚಡಚಣ ಸಮೀಪ ಇಂದು ನಡೆದಿದೆ.
ಎದುರಿನಿಂದ ವೇಗವಾಗಿ ಬಂದ ಶಾಲಾ ವಾಹನಕ್ಕೆ ಡಿಕ್ಕಿ ತಪ್ಪಿಸಲು ಕೆಎಸ್ಆರ್ಟಿಸಿ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂಬದಿ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್ ನಿಯಂತ್ರಣಕ್ಕೆ ಬಾರದೆ ಮುಂದಿನ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ಬಸ್‌ಗಳಲ್ಲಿದ್ದ ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಾಳುಗಳಾಗಿವೆ. ಈ ಪೈಕಿ ಹತ್ತಕ್ಕೂ ಹೆಚ್ಚಿನ ಜನರಿಗೆ ಹಲ್ಲು, ಕೈ, ಕಾಲು ಮೂಳೆ ಮುರಿತದಂತಹ ಗಂಭೀರ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಹತ್ತಿರದ ಚಡಚಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಐಶ್ವರ್ಯ ಜತ್ತಿ ಎನ್ನುವ ವಿದ್ಯಾರ್ಥಿನಿ ತಲೆಗೆ ಗಂಭೀರ ಪೆಟ್ಟಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತಕ್ಕಿಡಾದ ಎರಡೂ ಬಸ್‌ಗಳು ಇಂಡಿ ಡಿಪೋಗೆ ಸೇರಿದ್ದಾಗಿದ್ದು, ಇಂಡಿ -ಭತಗುಣಕಿ - ಚಡಚಣ ಮತ್ತು ಹಿಂಗಣಿ - ಚಡಚಣಕ್ಕೆ ಈ ಬಸ್‌ಗಳು ಪ್ರಯಾಣ ಬೆಳೆಸಿದ್ದವು.