ಕರ್ನಾಟಕ

karnataka

ETV Bharat / state

ನಾಗಮಂಗಲದಲ್ಲಿ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಪತ್ರಕರ್ತ ಸಾವು - Journalist died in accident - JOURNALIST DIED IN ACCIDENT

ಪ್ರಸ್ತುತ ಪತ್ರಕರ್ತ ವೃತ್ತಿಯ ಜತೆಗೆ ತಾಲೂಕು ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿದ್ದ ಬಿ.ಸಿ.ಮೋಹನ್​ ಕುಮಾರ್​ ಅವರು ಹೇಮಾವತಿ ನಾಲೆಗಳಿಗೆ ನೀರು ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Accident between car and lorry in Nagamangala: Journalist died
ನಾಗಮಂಗಲದಲ್ಲಿ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಪತ್ರಕರ್ತ ಸಾವು (ETV Bharat)

By ETV Bharat Karnataka Team

Published : Jul 26, 2024, 10:26 PM IST

ಮಂಡ್ಯ: ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಿರಿಯ ಪತ್ರಕರ್ತ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯ ಚಾಮರಾಜನಗರ - ಜೇವರ್ಗಿ ರಾ.ಹೆದ್ದಾರಿಯ ತೊಳಲಿ ಗ್ರಾಮದ ಸಮೀಪ ಶುಕ್ರವಾರ ಸಂಜೆ ನಡೆದಿದೆ. ನಾಗಮಂಗಲ ತಾಲೂಕಿನ ಕಸಬಾ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸಿ.ಚಂದ್ರಪ್ಪ ಅವರ ಪುತ್ರ ಬಿ.ಸಿ.ಮೋಹನ್ ಕುಮಾರ್(49) ಮೃತಪಟ್ಟಿದ್ದಾರೆ.

ಕಾರ್ಯನಿಮಿತ್ತ ಬೆಳ್ಳೂರಿಗೆ ತೆರಳಿ ನಾಗಮಂಗಲಕ್ಕೆ ತಮ್ಮ ಕಾರಿನಲ್ಲಿ ಹಿಂದಿರುವಾಗ ಮೈಸೂರಿನಿಂದ ಬೆಳ್ಳೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಕಾರು ಚಲಾಯಿಸುತ್ತಿದ್ದ ಬಿ.ಸಿ.ಮೋಹನ್ ಕುಮಾರ್ ಅವರಿಗೆ ತೀವ್ರತರವಾಗಿ ತಲೆಗೆ ಪೆಟ್ಟುಬಿದ್ದಿತ್ತು. ಸ್ಥಳೀಯರು ಬಿಜಿ‌ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೃತರು ಪ್ರಜಾವಾಣಿ, ವಿಜಯವಾಣಿ, ಆಂದೋಲನ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕನ್ನಡಪರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಪತ್ರಕರ್ತ ವೃತ್ತಿಯ ಜತೆಗೆ ತಾಲೂಕು ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿದ್ದ ಇವರು ತಾಲೂಕಿನ ಹೇಮಾವತಿ ನಾಲೆಗಳಿಗೆ ನೀರು ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ರೈತರ ಪರವಾಗಿ ಹಾಗೂ ಕನ್ನಡಪರವಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.

ಮೃತರು ತಾಯಿ ಪದ್ಮ, ಪತ್ನಿ ಲತಾ ಹಾಗೂ ಸಹೋದರ ಮತ್ತು ಸಹೋದರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಪಿ.ರಾಮಯ್ಯ ಮತ್ತು ಎನ್.ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ವಿದೇಶದಿಂದ ಬಂದ ಮಾವನನ್ನು ಸ್ವಾಗತಿಸಲು ಹೋಗುವಾಗ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಐವರು ಸಾವು! - HORRIFIC ROAD ACCIDENT

ABOUT THE AUTHOR

...view details