ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಸ್ಥಾನಕ್ಕೆ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಅವರನ್ನು ನೇಮಕ ಮಾಡಿದ್ದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ. ಹಲವು ವರ್ಷಗಳಿಂದ ಪ್ರತಿನಿಧಿಸುತ್ತ ಬಂದಿರುವ ಸ್ವಂತ ಕ್ಷೇತ್ರ ಶಾಂತಿನಗರವನ್ನೇ ಅಭಿವೃದ್ಧಿ ಪಡಿಸಲಾಗದ ಹ್ಯಾರಿಸ್ ಅವರ ಕೈಗೆ ಇಡೀ ಬೆಂಗಳೂರು ಅಭಿವೃದ್ಧಿಪಡಿಸುವ ಜವಾಬ್ದಾರಿ ವಹಿಸಿರುವುದು ಪ್ರಶ್ನಾರ್ಹ. ಬಿಡಿಎ ಅಧ್ಯಕ್ಷರಾಗಲು ಅವರಿಗಿರುವ ಅರ್ಹತೆ ಏನು ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಪ್ರಶ್ನಿಸಿದ್ದಾರೆ.
ಬಿಡಿಎ ಅಧ್ಯಕ್ಷರಾಗಿ ಹ್ಯಾರಿಸ್ ನೇಮಕ ವಿಚಾರವಾಗಿ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿರುವ ಮೋಹನ್ ದಾಸರಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಜನಪ್ರತಿನಿಧಿಗಳಿಗೆ ಮಣೆ ಹಾಕುವ ಪದ್ಧತಿ ಬಿಟ್ಟು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಬೆಂಗಳೂರು ಅಭಿವೃದ್ಧಿಯತ್ತ ಸಾಗಬಹುದು ಎಂಬ ಭರವಸೆ ವ್ಯಕ್ತವಾಗಿತ್ತು. ಆದರೆ, 7 ತಿಂಗಳ ಅವಧಿಯಲ್ಲೇ ಅವರಿಂದ ಅಧಿಕಾರವನ್ನು ಕಸಿದು ಪುನಃ ರಾಜಕಾರಣಿಗಳ ಹೆಗಲಿಗೆ ಏರಿಸಲಾಗುತ್ತಿದೆ. ಇಂತಹ ಬದಲಾವಣೆಗೆ ಎದುರಾದ ಒತ್ತಡವೇನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಈಜಿಪುರ ಸ್ಲಂ ಪ್ರದೇಶ ಅಭಿವೃದ್ಧಿ ಪಡಿಸಲು ಖಾಸಗಿ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ಸಂಪೂರ್ಣ ಹಳ್ಳ ಹಿಡಿದಿದೆ. ಅಭಿವೃದ್ಧಿಪಡಿಸಿ ನೂತನ ಮನೆಗಳನ್ನು ಕಟ್ಟಿಕೊಡುತ್ತೇವೆ ಎಂಬ ನೆಪವೊಡ್ಡಿ ತೆರವುಗೊಳಿಸಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಆಗಿದೆ. ಇದುವರೆಗೂ ಅಲ್ಲಿನ ಸಾವಿರಾರು ಕುಟುಂಬಗಳು ಬೀದಿಬದಿಯಲ್ಲಿಯೇ ವಾಸಿಸುತ್ತಿವೆ. ಇಂತಹ ಕರಾಳ ಮುಖವನ್ನು ಹೊತ್ತಿರುವ ಶಾಸಕ ಹ್ಯಾರಿಸ್, ಬೆಂಗಳೂರಿನ ಅಭಿವೃದ್ಧಿ ಹೇಗೆ ಮಾಡುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ದೂರಿದ್ದಾರೆ.
ನಗರದ ಅತಿದೊಡ್ಡ ಕೊಳಚೆ ಪ್ರದೇಶ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿದೆ. ಮಿತಿಯೇ ಇಲ್ಲದ ರಾಜಕಾಲುವೆ ಒತ್ತುವರಿ, ಲೆಕ್ಕವಿಲ್ಲದಷ್ಟು ಹೊಂಡ-ಗುಂಡಿಗಳು, ಮ್ಯಾನ್‌ಹೋಲ್ ಹಾಗೂ ಚರಂಡಿಗಳ ತ್ಯಾಜ್ಯ ನೀರೆಲ್ಲ ಮೇಲೆ ಬಂದು ಗಬ್ಬೆದ್ದ ರಸ್ತೆಗಳೇ ತುಂಬಿವೆ. ದಿನಕ್ಕೊಂದು ಬಾರ್, ಪಬ್, ಹುಕ್ಕಾ ಬಾರ್‌ಗಳು ಹುಟ್ಟಿಕೊಳ್ಳುವ ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಅವ್ಯವಸ್ಥೆಗಳ ಕೂಪವಾಗಿವೆ. ಲೆಕ್ಕವಿಲ್ಲದಷ್ಟು ಅನಧಿಕೃತ ಕಟ್ಟಡಗಳು, ಪಬ್, ಹುಕ್ಕಾಬಾರ್‌ಗಳು ತಾಂಡವವಾಡುತ್ತಿವೆ. ಡ್ರಗ್ ಮಾಫಿಯಾಗೆ ಕಡಿವಾಣವೇ ಇಲ್ಲವಾಗಿದೆ. ಒಂದೇ ಒಂದು ಸ್ಲಮ್ ಅಭಿವೃದ್ಧಿ ಪಡಿಸಿರುವ ಉದಾಹರಣೆ ಇದ್ದರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನಿಗಮ ಮಂಡಳಿ ನೇಮಕ ಪಟ್ಟಿ ಬಿಡುಗಡೆ: 32 ಶಾಸಕರಿಗೆ ಸ್ಥಾನ: ಇಲ್ಲಿದೆ ಪೂರ್ಣಪಟ್ಟಿ