ಬೆಂಗಳೂರು: ಮುಂದಿನ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್ಗಳ ನೋಂದಣಿಯನ್ನು ವಿದ್ಯಾರ್ಥಿಗಳ ಆಧಾರ್ನೊಂದಿಗೆ ಲಿಂಕ್ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸ್ತಾಪಿಸಿದೆ. ಸೀಟ್ ಬ್ಲಾಕಿಂಗ್ ದಂಧೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರಾಧಿಕಾರವು ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಕೆಇಎ ಈ ಪ್ರಸ್ತಾವನೆಯನ್ನು ಈಗಾಗಲೇ ಇ-ಆಡಳಿತ ಇಲಾಖೆಗೆ ಸಲ್ಲಿಸಿದೆ.
ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ:ಇ-ಆಡಳಿತ ಇಲಾಖೆಯು ನಮ್ಮ ಪ್ರಸ್ತಾಪದ ಪರವಾಗಿದೆ ಮತ್ತು ಅವರು ಅನುಮೋದನೆಗಾಗಿ ನಮ್ಮ ಪ್ರಸ್ತಾಪವನ್ನು ಭಾರತ ಸರ್ಕಾರಕ್ಕೆ ಕಳುಹಿಸಿದ್ದಾರೆ. ಶೀಘ್ರದಲ್ಲೇ ಅನುಮೋದನೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪಿಟಿಐಗೆ ತಿಳಿಸಿದ್ದಾರೆ.
ವಂಚನೆ ತಡೆಯುವ ಉದ್ದೇಶದಿಂದ ಈ ಕ್ರಮ:"ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು, ನೋಂದಣಿಯಲ್ಲಿ ಯಾವುದೇ ವಂಚನೆಯನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ಗಳಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಆಧಾರ್-ಲಿಂಕ್ಡ್ ನೋಂದಣಿಯನ್ನು ಪ್ರಸ್ತಾಪಿಸಲಾಗಿದೆ" ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳಿಗೆ ಕೆಇಎ ನಡೆಸುವ ನೇಮಕಾತಿ ಪರೀಕ್ಷೆಗಳಿಗೂ ಆಧಾರ್ ಲಿಂಕ್ ಮಾಡಿದ ನೋಂದಣಿಯನ್ನು ಪರಿಚಯಿಸುವ ಯೋಜನೆಯೂ ಇದೆ ಎಂದು ಪ್ರಸನ್ನ ಹೇಳಿದರು.