ಕೊಪ್ಪಳ: ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತ ಅತಿಥಿಯಾಗಿ ಕೊಪ್ಪಳ ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ಯೋಗಪಟು ರೇಷ್ಮಾ ವಡ್ಡಟ್ಟಿ ಭಾಗವಹಿಸಲಿದ್ದಾರೆ.
ಆಯುಷ್ ಮಂತ್ರಾಲಯದಿಂದ ಆಹ್ವಾನ:ಗಣರಾಜ್ಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಜ್ಯದ ಪರವಾಗಿ ಯೋಗ ಪ್ರದರ್ಶನ ನೀಡಲಿದ್ದಾರೆ. ರಾಜ್ಯದಿಂದ ಒಟ್ಟು 18 ಜನ ಯೋಗಪಟುಗಳಿಗೆ ರಾಜ್ಯ ಆಯುಷ್ ಇಲಾಖೆ ಆಯುಕ್ತರು ನಾಮನಿರ್ದೇಶನ ಮಾಡಿದ್ದಾರೆ. ಈ ಪೈಕಿ ರೇಷ್ಮಾ ವಡ್ಡಟ್ಟಿ ಸೇರಿ ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಆಹ್ವಾನ ನೀಡಲಾಗಿದೆ.
ಆಯುಷ್ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ರೇಷ್ಮಾ ಸದ್ಯ ಕೊಪ್ಪಳ ತಾಲೂಕಿನ ಕಾಮನೂರಿನ ಆಯುರ್ವೇದ ಕ್ಷೇಮ ಕೇಂದ್ರದ ಆಸ್ಪತ್ರೆಯಲ್ಲಿ ಯೋಗ ಶಿಕ್ಷಕಿ ಹಾಗೂ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಯೋಗದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ಅವರು ಅನೇಕ ಪ್ರಶಸ್ತಿಗಳನ್ನು ಹಾಗೂ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೇಷ್ಮಾ ವಡ್ಡಟ್ಟಿ, ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದೇನೆ. ಕೊಪ್ಪಳದಿಂದ ನಾನು ಆಯ್ಕೆಯಾಗಿದ್ದೇನೆ. 25ನೇ ತಾರೀಖಿನಂದು ದೆಹಲಿಗೆ ಬೆಂಗಳೂರು ಮೂಲಕ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದೇವೆ. ಆ ದಿನ ಸಂಜೆ ನಡೆಯುವಂತಹ ಔತಣ ಕೂಟದಲ್ಲೂ ಭಾಗಿಯಾಗಲಿದ್ದೇವೆ. ಒಟ್ಟಾರೆ ಕರ್ನಾಟಕದಿಂದ 18 ಜನ ಆಯ್ಕೆ ಆಗಿದ್ದೇವೆ ಎಂದು ಹೇಳಿದ್ದಾರೆ.