ಬೆಂಗಳೂರು : ಜಲಮಂಡಳಿಯಿಂದ ತೋಡಲಾಗಿದ್ದ ಗುಂಡಿಗೆ ಬಿದ್ದು ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಕೆಂಗೇರಿ ಸಮೀಪದ ಕೊಮ್ಮಘಟ್ಟ ಸರ್ಕಲ್ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಸದ್ದಾಂ ಹುಸೇನ್ (20) ಸಾವನ್ನಪ್ಪಿದ ದುದೈರ್ವಿ. ದುರಂತದಲ್ಲಿ ಉಮ್ರಾನ್ ಪಾಷಾ ಹಾಗೂ ಮುಬಾರಕ್ ಪಾಷಾ ಎಂಬುವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೂವರು ಸ್ನೇಹಿತರಾಗಿದ್ದು ಜೆ. ಜೆ ನಗರ ನಿವಾಸಿಗಳಾಗಿದ್ದಾರೆ. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಸದ್ದಾಂ ಹುಸೇನ್ ತನ್ನ ಇನ್ನಿಬ್ಬರನ್ನ ಕೂರಿಸಿಕೊಂಡು ಬೈಕ್ನಲ್ಲಿ ಬರುವಾಗ ಕೊಮ್ಮಘಟ್ಟ ಬಳಿ ಜಲಮಂಡಳಿಯು ಪೈಪ್ ಕಾಮಗಾರಿಗಾಗಿ ತೋಡಿದ್ದ ಸುಮಾರು 10 ಅಡಿ ಗುಂಡಿಗೆ ಬೈಕ್ ಸಮೇತ ಬಿದ್ದಿದ್ದಾರೆ. ಪರಿಣಾಮ ಸದ್ದಾಂ ಹುಸೇನ್ ಸಾವನ್ನಪ್ಪಿದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.