ತುಮಕೂರು:ಜನರಕೂಗಾಟದಿಂದ ಬಲೆಗೆ ಬೀಳದೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರತೆಯನ್ನು ಅದರ ಬಾಲ ಹಿಡಿದು ಯುವಕನೊಬ್ಬಬಲೆಗೆ ಬೀಳಿಸಿದ ಘಟನೆ ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ. ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಗ್ರಾಮಸ್ಥರ ನೆರವಿನೊಂದಿಗೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ರಂಗಾಪುರ ಗ್ರಾಮದ ಪುರಲೇಹಳ್ಳಿ ರಸ್ತೆ ಕುಮಾರಣ್ಣ ಎಂಬವರ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಸುಮಾರು ನಾಲ್ಕೈದು ವರ್ಷದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿದಿತ್ತು. ಆದರೆ ಜನರ ಕೂಗಾಟದಿಂದ ಬಲೆಗೆ ಬೀಳದೇ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯನ್ನು ರಂಗಾಪುರ ಗ್ರಾಮದ ಆನಂದ್ ಎಂಬ ಯುವಕ ಧೈರ್ಯವಾಗಿ ಅದರ ಬಾಲ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬಲೆಗೆ ಕೆಡವಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.