ಬೆಳಗಾವಿ: ಅದೆಷ್ಟೋ ಕುಟುಂಬಗಳಲ್ಲಿ ಸಾಲ-ಸೂಲ ಮಾಡಿ, ಇಲ್ಲವೇ ಜಮೀನು ಸೇರಿ ಮತ್ತಿತರ ಆಸ್ತಿಗಳನ್ನು ಮಾರಾಟ ಮಾಡಿ ಮದುವೆ ಮಾಡುವುದನ್ನು ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಯುವ ರೈತ ಎಲೆಕೋಸು(ಕ್ಯಾಬೇಜ್) ಬೆಳೆದು ಬರೊಬ್ಬರಿ 4 ಲಕ್ಷ ರೂ. ಲಾಭ ಗಳಿಸಿದ್ದಾನೆ. ಇದೇ ಹಣದಲ್ಲಿ ತಂಗಿ ಮದುವೆ ಮಾಡಲು ಮುಂದಾಗುವ ಮೂಲಕ ಇಡೀ ಊರಿಗೆ ಮಾದರಿಯಾಗಿದ್ದಾನೆ.
ಈ ಬಾರಿ ಹವಾಮಾನದ ವೈಪರೀತ್ಯದ ಪರಿಣಾಮ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ಅನುಭವಿಸಿದ್ದಾರೆ. ಆದರೆ, ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದ ಆಕಾಶ ಪ್ರಕಾಶ ಭದ್ರಶೆಟ್ಟಿ ಎಂಬ ಯುವ ರೈತ ಕೇವಲ 1 ಎಕರೆಯಲ್ಲಿ ಬೆಳೆದ ಎಲೆಕೋಸು(ಕ್ಯಾಬೇಜ್) ಅವರ ಕೈಹಿಡಿದಿದ್ದು, ಒಳ್ಳೆಯ ಬೆಲೆ ಸಿಕ್ಕ ಪರಿಣಾಮ ತನ್ನ ತಂಗಿಯ ಮದುವೆ ಖರ್ಚು ವೆಚ್ಚಗಳಿಗೆ ಈ ಹಣ ಬಳಸಲು ಸಜ್ಜಾಗಿದ್ದಾನೆ.
ಇದೇ ವರ್ಷ ಬಿಎ ಪದವಿ ಮುಗಿಸಿರುವ ಯುವ ರೈತ ಆಕಾಶ, ಕಾಲೇಜು ಓದುತ್ತಲೇ ಕೃಷಿ ಚಟುವಟಿಕೆಯಲ್ಲಿ ತಂದೆ ಪ್ರಕಾಶ ಅವರಿಗೆ ನೆರವಾಗುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ತಂದೆಗಿಂತ ತಾನೇ ಹೆಚ್ಚು ಕೃಷಿಯಲ್ಲಿ ತೊಡಗಿದ್ದು, ಈ ಬಾರಿ ಹೇಗಾದರೂ ಮಾಡಿ ಒಳ್ಳೆಯ ಲಾಭ ಗಳಿಸಿ ತಂಗಿ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿ ಕ್ಯಾಬೇಜ್ ಬೆಳೆದಿದ್ದರು. ಅಂದುಕೊಂಡಂತೆ ಕ್ಯಾಬೇಜ್ ಭರಪೂರ ಲಾಭ ತಂದು ಕೊಟ್ಟಿದ್ದು, 4.50 ಲಕ್ಷ ರೂ. ಆದಾಯ ಕೈ ಸೇರಿದೆ. ಇದರಿಂದ ಭದ್ರಶೆಟ್ಟಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಇಮ್ಮಡಿಯಾಗಿದೆ.
ಈಟಿವಿ ಭಾರತ ಕನ್ನಡ ಜೊತೆಗೆ ಮಾತನಾಡಿದ ರೈತ ಆಕಾಶ ಭದ್ರಶೆಟ್ಟಿ, 1 ಎಕರೆ ಹೊಲದಲ್ಲಿ 1 ಅಡಿ ಅಂತರದಲ್ಲಿ ಸಾಲು ಬಿಟ್ಟಿದ್ದೆವು. ನರ್ಸರಿಯಿಂದ ತಂದಿದ್ದ 55 ಸಾವಿರ ಸಸಿ ಹಚ್ಚಿದ್ದು, ಒಂದು ತಿಂಗಳು ನಿರಂತರವಾಗಿ ಮಳೆ ಆಗಿದ್ದರಿಂದ ಹೆಚ್ಚು ಗೊಬ್ಬರ ಹಾಕಿದೆವು. ಅದರಿಂದಲೇ ಹೆಚ್ಚು ಇಳುವರಿ ಬರಲು ಸಾಧ್ಯವಾಯಿತು. 30 ಟನ್ ಕ್ಯಾಬೇಜ್ ಬಂದಿದ್ದು, ಒಟ್ಟು 4.50 ಲಕ್ಷ ರೂ. ಆದಾಯ ಸಿಕ್ಕಿದೆ. ಸಸಿ, ಗೊಬ್ಬರ, ಕೀಟನಾಶಕ ಸೇರಿ 55 ಸಾವಿರ ರೂ. ಖರ್ಚು ಮಾಡಿದ್ದೆವು. ಲಾಭದ ಹಣದಲ್ಲಿ ತಂಗಿ ಮದುವೆಗೆ ಈಗಾಗಲೇ 40 ಗ್ರಾಂ ಬಂಗಾರ ಖರೀದಿಸಿದ್ದು, ಇನ್ನುಳಿದ ಹಣವನ್ನೂ ತಂಗಿ ಮದುವೆಗೆ ಖರ್ಚು ಮಾಡುತ್ತೇವೆ. ನನಗೆ ನಮ್ಮ ತಂದೆಯವರು ಕೈ ಜೋಡಿಸಿದರು. ಇಬ್ಬರೂ ಸೇರಿ ಕಷ್ಟ ಪಟ್ಟು ದುಡಿದೆವು. ಸಸಿ ನೆಟ್ಟ 65 ದಿನಕ್ಕೆ ಕ್ಯಾಬೇಜ್ ಕಟಾವ್ ಶುರುವಾಯಿತು. ಕ್ಯಾಬೇಜ್ ಕೈ ಹಿಡಿದಿದ್ದರಿಂದ ತಂಗಿ ಮದುವೆ ಚಿಂತೆ ನಮ್ಮಿಂದ ದೂರಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಕೃಷಿಯೇ ನಮ್ಮ ದೇಶದ ಬೆನ್ನೆಲುಬು. ಹಾಗಾಗಿ, ಅವರಿವರ ಕೈಯಲ್ಲಿ ದುಡಿಯುವುದಕ್ಕಿಂತ ಇದ್ದಷ್ಟು ನಮ್ಮ ಹೊಲದಲ್ಲೇ ಜಾಣತನದಿಂದ ಕೃಷಿ ಮಾಡಿದರೆ, ಅದರಲ್ಲೇ ಸುಖ ಕಾಣಬಹುದು. ಬೇರೆ ಬೇರೆ ಬೆಳೆಗಳ ಪ್ರಯೋಗ ಮಾಡಿದರೆ ಖಂಡಿತವಾಗಲೂ ಒಳ್ಳೆಯ ಲಾಭ ಗಳಿಸಬಹುದು. ಕೃಷಿಯಲ್ಲೇ ಮುಂದುವರಿಯುವ ಆಲೋಚನೆ ಇದ್ದು, ಭವಿಷ್ಯದಲ್ಲಿ ಮತ್ತಷ್ಟು ಒಳ್ಳೆಯ ಬೆಳೆ ತೆಗೆಯುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ಯುವ ರೈತ ಆಕಾಶ ಭದ್ರಶೆಟ್ಟಿ.
ರೈತ ಉಳವಪ್ಪ ಕೋಟಗಿ ಮಾತನಾಡಿ, ಕಷ್ಟ ಪಟ್ಟು ದುಡಿದರೆ ಭೂಮಿ ತಾಯಿ ಕೈ ಬಿಡುವುದಿಲ್ಲ ಎಂಬುದಕ್ಕೆ ಆಕಾಶನೇ ಉದಾಹರಣೆ. ನಿಯಮಿತವಾಗಿ ಗೊಬ್ಬರ, ಔಷಧೋಪಚಾರ ಮಾಡಿದ್ದರಿಂದ ತುಂಬಾ ಚೆನ್ನಾಗಿ ಕ್ಯಾಬೇಜ್ ಬೆಳೆದಿದ್ದರು. ಬೆಳೆಗೆ ತಕ್ಕಂತೆ ಒಳ್ಳೆಯ ಬೆಲೆ ಸಿಕ್ಕಿದ್ದು, ಖರ್ಚು ತೆಗೆದು 4 ಲಕ್ಷ ರೂ. ಲಾಭ ಗಳಿಸಿದ್ದಾರೆ. ಈಗ ಅವರಿಗೆ ಸಿಕ್ಕಿದ್ದು ಮಧ್ಯಮ ದರ, ಪೂರ್ತಿ ದರ ಸಿಕ್ಕಿದ್ದರೆ 10 ಲಕ್ಷ ರೂ. ಲಾಭ ಆಗುತ್ತಿತ್ತು. ಚಿಕ್ಕ ಹುಡುಗನಾದ್ರೂ ಈ ಯುವಕ ನಮಗೆಲ್ಲಾ ಮಾದರಿಯಾಗಿದ್ದಾನೆ. ಇನ್ನು ಕ್ಯಾಬೇಜ್ ಬೆಳೆದರೆ ಲಾಭದ ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎಂದು ಹೇಳಿದರು.