ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನವಾಗಿದೆ ಎಂದು ಎರಡು ವರ್ಷದ ಹಿಂದೆ ನೀಡಿದ್ದ ದೂರಿನ ಜೊತೆ ರಾಜಾರೋಷವಾಗಿ ವಾಹನದಲ್ಲಿ ಓಡಾಡುತ್ತಿರುವ ಬಗ್ಗೆ ಫೋಟೋ ಸಮೇತ ಮಾಹಿತಿ ನೀಡಿದರೂ ಖದೀಮನನ್ನ ಬಂಧಿಸಲು ಡಿ.ಜೆ. ಹಳ್ಳಿ ಪೊಲೀಸರು ಮೀನಾಮೇಷ ಎಣಿಸುತ್ತಿರುವ ಆರೋಪ ಕೇಳಿಬಂದಿದೆ.
ಕಳ್ಳತನವಾದ ದ್ವಿಚಕ್ರವಾಹನ ನಗರದೆಲ್ಲೆಡೆ ಓಡಾಡಿ ಸಂಚಾರ ನಿಯಮ ಉಲ್ಲಂಘಿದ್ದು, ಇದರ ಪರಿಣಾಮ ವಾಹನದ ಮಾಲೀಕರಿಗೆ ದಂಡದ ನೋಟಿಸ್ ಬರುತ್ತಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕಳ್ಳ ಮತ್ತು ವಾಹನವನ್ನು ಪತ್ತೆಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂದು ಮಾಲೀಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದ್ವಿಚಕ್ರವಾಹನವನ್ನು ಖದೀಮ ಬೇರೆಯವರಿಗೆ ಮಾರಾಟ ಮಾಡಿರುವ ಶಂಕೆಯಿದ್ದು, ನಿಯಮ ಉಲ್ಲಂಘಿಸಿದ ವಾಹನದಲ್ಲಿ ಎಲ್ಲಾ ವರ್ಗದ ವಯೋಮಾನದವರು ಓಡಾಡುತ್ತಿದ್ದಾರೆ. ಅಲ್ಲದೆ, ಬರೋಬ್ಬರಿ 18 ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಸಂಬಂಧ 9 ಸಾವಿರ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ಬಂದಿರುವುದು ಬೈಕ್ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದಿದ್ದ ಕಳ್ಳ; ಮೊಹಮ್ಮದ್ ಮೀಸ್ಬಾದ್ದಿನ್ ದ್ವಿಚಕ್ರ ವಾಹನ ಕಳೆದುಕೊಂಡ ಮಾಲೀಕರಾಗಿದ್ದು, ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರದಲ್ಲಿ ಕಳೆದ 10 ವರ್ಷಗಳಿಂದ ವಾಸವಾಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್, 2021ರ ಡಿಸೆಂಬರ್ ನಲ್ಲಿ ಸುಜುಕಿ ಆ್ಯಕ್ಸಿಸ್ ವಾಹನ ಖರೀದಿಸಿದ್ದರು. ಇದಾದ 11 ತಿಂಗಳಲ್ಲಿ ಅಂದರೆ 2022ರ ಅಕ್ಟೋಬರ್ ರಂದು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನವಾಗಿತ್ತು. ಈ ಸಂಬಂಧ ಡಿ. ಜೆ. ಹಳ್ಳಿ ಪೊಲೀಸರಿಗೆ ಮೊಹಮ್ಮದ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರೂ ದ್ವಿಚಕ್ರವಾಹನ ಪತ್ತೆಯಾಗದಿದ್ದರಿಂದ ಸುಮ್ಮನಾಗಿದ್ದರು.