ಹುಬ್ಬಳ್ಳಿ :ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡಲು ಚುನಾವಣಾ ಆಯೋಗ ಸಾಕಷ್ಟು ಕಸರತ್ತು ನಡೆಸುತ್ತಿದೆ. ಆಯೋಗಕ್ಕೆ ಹುಬ್ಬಳ್ಳಿ ಜನ ಸಾಥ್ ನೀಡಿದ್ದಾರೆ. ಮತದಾನ ಮಾಡಿ ಬಂದ ಮತದಾರರಿಗೆ ಇದೀಗ ರಿಯಾಯಿತಿ ದರದಲ್ಲಿ ಇಡ್ಲಿ ವಿತರಿಸಲು ಬೀದಿ ಬದಿ ವ್ಯಾಪಾರಿಯೊಬ್ಬರು ಮುಂದಾಗಿದ್ದಾರೆ.
ಇಲ್ಲಿನ ದುರ್ಗದಬೈಲ್ ಸರ್ಕಲ್‌ನ ಇಡ್ಲಿ ಮಾರಾಟಗಾರ ಭಾಸ್ಕರ್ ಡೋಂಗ್ರೆ ಅವರು ಮೇ 7 ರಂದು ಮತ ಚಲಾಯಿಸುವವರಿಗೆ ಕೇವಲ 5 ರೂಪಾಯಿಗೆ ಇಡ್ಲಿ ನೀಡುವುದಾಗಿ ಘೋಷಿಸಿದ್ದಾರೆ. ರಿಯಾಯಿತಿ ದರದಲ್ಲಿ ಉಪಹಾರ ಸೇವಿಸಬೇಕಿದ್ದರೆ, ಗ್ರಾಹಕರು ತಮ್ಮ ಶಾಯಿ ಹಚ್ಚಿದ ಬೆರಳನ್ನು ತೋರಿಸಬೇಕು. ರಿಯಾಯಿತಿ ದರದಲ್ಲಿ ಇಡ್ಲಿ ನೀಡುವ ಮೂಲಕ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಭಾಸ್ಕರ್ ಡೋಂಗ್ರೆ ಅವರ ಉದ್ದೇಶವಾಗಿದೆ.
ಈ ಬಗ್ಗೆ ಹೋಟೆಲ್ ಮಾಲಿಕ ಭಾಸ್ಕರ್ ಡೋಂಗ್ರೆ ಮಾತನಾಡಿ, ನಗರ ಪ್ರದೇಶಗಳಲ್ಲಿನ ಕಳಪೆ ಮತದಾನವನ್ನು ನೋಡಿದಾಗ, ನಾನು ಒಂದು ಇಡ್ಲಿಯನ್ನು 5 ರೂ.ಗೆ ಮಾರಾಟ ಮಾಡಲು ಯೋಜಿಸಿದೆ. ಇದು ಸಾಮಾನ್ಯ ಬೆಲೆಗಿಂತ ಅರ್ಧದಷ್ಟಾಗಿದೆ. ಪ್ರಸ್ತುತ, ನಾನು ಸುಮಾರು 500 ಮತದಾರರಿಗೆ ರಿಯಾಯಿತಿ ದರದಲ್ಲಿ ಇಡ್ಲಿ ನೀಡಲು ನಿರ್ಧರಿಸಿದ್ದೇನೆ. ಈ ಸಂಖ್ಯೆ ಮೀರಿದರೂ ನಾನು ಸಿದ್ಧನಿದ್ದೇನೆ. ನಾನು ಇದನ್ನು ಮೊದಲ ಬಾರಿಗೆ ಮಾಡುತ್ತಿರುವುದರಿಂದ, ಮತ ಚಲಾಯಿಸಿದ ನಂತರ ಎಷ್ಟು ಜನರು ನನ್ನ ಹೋಟೆಲ್ಗೆ ಭೇಟಿ ನೀಡುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.
ಹೋಟೆಲ್ ಬೆಳಗ್ಗೆ 7 ಗಂಟೆಗೆ ತೆರೆಯುತ್ತೇನೆ. ನಾನು ಇಡ್ಲಿಗಳನ್ನು ಬೆಳಗ್ಗೆ 9 ಗಂಟೆಯವರೆಗೆ ಮಾರಾಟ ಮಾಡಲು ಯೋಜಿಸಿದೆ. ನಿತ್ಯ 10 ರೂ. ಗೆ ಇಡ್ಲಿ ಮಾರಾಟ ಮಾಡುತ್ತಿದ್ದು, ಮತದಾನ ಮಾಡಿ ಬಂದವರಿಗೆ 5 ರೂ.ಗೆ ಇಡ್ಲಿ ಮಾರುವುದಾಗಿ ಘೋಷಿಸಿದ್ದಾರೆ. ಇದೊಂದು ಉತ್ತಮ ಕೆಲಸ ಆಗಿದ್ದು, ಜನರು ಮತದಾನಕ್ಕಾಗಿ ಮನೆಯಿಂದ ಹೊರ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಈ ರೀತಿ ಕಡಿಮೆ ದರದಲ್ಲಿ ಉಪಹಾರ ನೀಡುತ್ತಿದ್ದಾರೆ. ಈ ಮೂಲಕ ಮತದಾನ ಹೆಚ್ಚಳ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ :ರಾಜ್ಯದಲ್ಲಿ ನಾಳೆ ಎರಡನೇ ಹಂತದ ಮತದಾನ: ಮತಗಟ್ಟೆಗೆ ಹೋಗುವ ಮುನ್ನ ತಿಳಿಯಬೇಕಾದ ಮಹತ್ವದ ಅಂಶಗಳು! - How To Cast A Vote