ಕೇಂದ್ರ ಸಚಿವ ಹೆಚ್ಡಿಕೆಗೆ ವಿಶೇಷ ಉಡುಗೊರೆ: ರೋಸ್ ವುಡ್ ಕುರ್ಚಿ ನೀಡುತ್ತಿರುವ ಮುಖಂಡ ಸಾಯಿ ಪ್ರಸನ್ನ (ETV Bharat) ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಗೆಜ್ಜಲಗೆರೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಾಯಿ ಪ್ರಸನ್ನ ಅವರು ರೋಸ್ ವುಡ್ ಮರದಿಂದ ನಿರ್ಮಿಸಿರುವ 80,000 ಸಾವಿರ ಬೆಲೆ ಬಾಳುವ ಕುರ್ಚಿಯನ್ನು ಉಡುಗೊರೆಯಾಗಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮಕ್ಕೆ ಮಧ್ಯಾಹ್ನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ. ಸಾಯಿ ಪ್ರಸನ್ನ ಅವರು ಮೈಸೂರಿನ ಗೋಸಿಯ ಗಾಡಿನಲ್ಲಿ ಉತ್ತಮ ಮರಗೆಲಸ ಮಾಡುವವರಿಂದ ಗಂಡುಬೇರುಂಢ, ರಾಜಲಾಂಛನ, ಆಮೆ ಚಿತ್ರಗಳನ್ನು ಕೆತ್ತನೆ ಮಾಡಿಸಿ ವಿಶೇಷವಾಗಿ ಉಡುಗೊರೆಯಾಗಿ ನೀಡಿ ಅಭಿನಂದಿಸಲಿದ್ದಾರೆ.
ಈ ಬಗ್ಗೆ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾಯಿ ಪ್ರಸನ್ನ ಅವರು ಮಾತನಾಡಿ, "ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದೆ. ಆಗ ಮುಖ್ಯಮಂತ್ರಿಯಾದರು. ಈ ಬಾರಿ ಎಂಪಿ ಚುನಾವಣೆಯಲ್ಲಿ ಕೇಂದ್ರ ಸಚಿವರಾಗಲಿ ಎಂದು ಸಾಯಿ ದೇವರಲ್ಲಿ ಹರಕೆ ಹೊತ್ತಿದ್ದೆ, ಇಂದು ಸಂಸದರಾಗಿ ಕೇಂದ್ರ ಸಚಿವರಾಗಿದ್ದಾರೆ. ಈ ವಿಶೇಷ ಕುರ್ಚಿಯಲ್ಲಿ ಕುಳಿತರೆ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ಹರಕೆ ಮಾಡಿಕೊಂಡಿದ್ದೇನೆ. ಮುಂದೊಂದು ದಿನ ಆಗುತ್ತಾರೆ ಎಂಬ ನಂಬಿಕೆ ಇದೆ. ದೇವರಲ್ಲಿ ಪ್ರಾರ್ಥಿಸಿದ್ದೇವೆ, ಖಂಡಿತವಾಗಿ ಅವರು ಪ್ರಧಾನಿ ಆಗುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಗ್ರಾಮದ ಬಳಿ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಈ ವಿಶೇಷ ಕುರ್ಚಿಯನ್ನು ಕೊಡುಗೆಯಾಗಿ ನೀಡಿ, ಅಭಿನಂದಿಸಿ ಸಿಹಿ ಹಂಚಲಾಗುವುದು. ನಾವು ವಿದ್ಯಾರ್ಥಿ ಹಾಗೂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಹೆಚ್.ಡಿ.ದೇವೇಗೌಡ ಅವರ ಅಪ್ಪಟ ಅಭಿಮಾನಿಗಳು, ಕುಮಾರಸ್ವಾಮಿ ಅವರ ಅಭಿಮಾನಿಗಳು. ಅವರ ಕುಟುಂಬದ ರಾಜಕಾರಣ ಗೌಡರತನ ಉಳಿಸಲು ನಾವು ದೇವರಲ್ಲಿ ಹರಕೆ ಹೊತ್ತಿದ್ದು, ಆ ದೇವರ ಹರಕೆ ಇಂದು ಫಲಿಸಿದೆ. ಹೀಗಾಗಿ ನಾವು ಈ ಉಡುಗೊರೆಯನ್ನು ನೀಡುತ್ತಿದ್ದೇವೆ" ಎಂದರು.
ಇದನ್ನೂ ಓದಿ:ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ನಾಳೆ ಬೆಂಗಳೂರಿಗೆ ಕುಮಾರಸ್ವಾಮಿ: ಅದ್ಧೂರಿ ಸ್ವಾಗತಕ್ಕೆ ಜೆಡಿಎಸ್ ಸಿದ್ಧತೆ - Union Minister Kumaraswamy