ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಿರುವ ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ವಿಭಾಗಕ್ಕೆ ಟಕ್ಕರ್ ನೀಡಲು ಮುಂದಾಗಿರುವ ನಟ ದರ್ಶನ್ ಈ ಸಂಬಂಧ ಹಿರಿಯ ವಕೀಲರನ್ನು ನೇಮಿಸಲು ಕಾರ್ಯೋನ್ಮುಖರಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿ ದರ್ಶನ್ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಆರೋಪಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಕಾನೂನು ಸಮರದಲ್ಲಿ ಗೆಲುವು ಪಡೆಯಲು ದರ್ಶನ್ ಪರ ವಾದಿಸಲು ಹಿರಿಯ, ನುರಿತ ವಕೀಲರ ನೇಮಕ ಮಾಡಲು ಸಿದ್ಧತೆ ನಡೆಸಲಾಗಿದೆ.
ಖ್ಯಾತ, ಹಿರಿಯ ಸುಪ್ರೀಂ ಕೋರ್ಟ್ ವಕೀಲರಾಗಿರುವ ಕಪಿಲ್ ಸಿಬಲ್ ಅವರನ್ನು ದರ್ಶನ್ ಕುಟುಂಬ ಭೇಟಿ ಮಾಡಿದೆ ಎನ್ನಲಾಗಿದೆ. ಪ್ರಕರಣದ ವಿಚಾರವಾಗಿ ದರ್ಶನ್ ಪರ ವಕೀಲರು ಹಾಗೂ ಕುಟುಂಬಸ್ಥರು ವಾದ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಈ ಹಿಂದಿನ ಹೈಕೋರ್ಟ್ ವಾದ-ಪ್ರತಿವಾದ, ಪ್ರಕರಣದ ಹಿನ್ನೆಲೆ ವಿವರಗಳನ್ನು ನೀಡಲಾಗಿದೆ. ಮಾರ್ಚ್ 18ರಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು, ಹಿರಿಯ ವಕೀಲರಾದ ಕಪಿಲ್ ಸಿಬಲ್ ವಾದ ಮಂಡನೆ ಮಾಡಲಿದ್ದಾರೆ ಎನ್ನುತ್ತಿವೆ ಮೂಲಗಳು.
ಇದನ್ನೂ ಓದಿ: 'ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ': ಅಭಿಮಾನಿಗಳಿಗೆ ದಾಸ ದರ್ಶನ್ ಹೇಳಿದ್ದಿಷ್ಟು
ಹೈಕೋರ್ಟ್ನಲ್ಲಿ ಗೆಲುವು ಕಂಡುಕೊಂಡಂತೆ ಸುಪ್ರೀಂನಲ್ಲೂ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆಗಳನ್ನು ತರ್ಜುಮೆ ಮಾಡುತ್ತಿರುವ ದರ್ಶನ್ ಪರ ವಕೀಲರು ವಿಚಾರಣೆ ದಿನ ಅದನ್ನು ತೆಗೆದುಕೊಂಡು ಹೋಗಲಿದ್ದಾರೆ. ಅಲ್ಲದೇ ಉಳಿದ ಆರೋಪಿಗಳ ಪರ ವಕೀಲರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನಷ್ಟೇ ಅಧಿಕೃತವಾಗಲಿದೆ.
ಇದನ್ನೂ ಓದಿ: 150 ಕೋಟಿ ರೂ. ಸಮೀಪಿಸಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಸಿನಿಮಾ: 4 ದಿನಗಳ 'ಛಾವಾ' ಕಲೆಕ್ಷನ್ ಹೀಗಿದೆ
ಪ್ರಕರಣದ ಹಿನ್ನೆಲೆ : 2024ರ ಜೂನ್ 9ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (33) ಎಂಬಾತರ ಮೃತದೇಹ ಪತ್ತೆಯಾಗಿತ್ತು. ದೂರು ದಾಖಲಾಗಿ ತನಿಖೆ ಶುರುವಾಯಿತು. ಜೂನ್ 11ರಂದು ದರ್ಶನ್ ಅವರನ್ನು ಅರೆಸ್ಟ್ ಮಾಡಲಾಯಿತು. ಗೆಳತಿ ಪವಿತ್ರಾ ಗೌಡರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ಈ ಕೊಲೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿತ್ತು. ವೈದ್ಯಕೀಯ ಕಾರಣಗಳ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್ 30ರಂದು ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಲಾಯಿತು. ಡಿಸೆಂಬರ್‌ನಲ್ಲಿ ಹೈಕೋರ್ಟ್ ರೆಗ್ಯುಲರ್ ಬೇಲ್ ನೀಡಿತು. ಆದ್ರೆ ಈ ಕೊಲೆ ಪ್ರಕರನದಲ್ಲಿ ನೇರವಾಗಿ ಭಾಗಿ ಆಗಿದ್ದಾರೆ ಎನ್ನಲಾದ 7 ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ 1,492 ಪುಟಗಳ ಕಡತವನ್ನ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಪ್ರಕರಣವೀಗ ಸುಪ್ರೀಂನಲ್ಲಿದೆ.