ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲ ಆಸ್ತಿಗಳಿಗೆ 3 ತಿಂಗಳೊಳಗಾಗಿ ಇ-ಖಾತಾ ನೀಡಲು ಪೌರಾಡಳಿತ ಇಲಾಖೆ ಸಿದ್ಧತೆ ನಡೆಸಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಅಭಿಯಾನ ಕೈಗೊಂಡು ಇ-ಖಾತಾ ನೀಡಲು ಯೋಜಿಸಲಾಗಿದೆ.
2025ರ ಮೇ 10ರೊಳಗಾಗಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಆಸ್ತಿಗಳಿಗೆ ಇ - ಖಾತಾ ನೀಡಲು ಅಭಿಯಾನ ನಡೆಸುವಂತೆ ಸೂಚನೆ ನೀಡಲಾಗಿದೆ.
ಇ-ಖಾತಾ ಕಾರ್ಯವಿಧಾನ ಏನು?: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಬಾಕಿಯಿರುವ ಆಸ್ತಿಗಳನ್ನು ಗುರುತಿಸಬೇಕು. ಹೀಗೆ ಗುರುತಿಸಲಾದ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಸ್ಥಾಪಿಸಬೇಕು. ಸಹಾಯವಾಣಿಯಲ್ಲಿ ಇ - ಖಾತಾ ಸಂಬಂಧಿಸಿದ ವಿಷಯದ ಕುರಿತು ಪರಿಪೂರ್ಣ ಮಾಹಿತಿ ಇರುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಸಹಾಯವಾಣಿಯ ಸಂಖ್ಯೆ ಮತ್ತು ವಾಟ್ಸ್ಆ್ಯಪ್ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚುರಪಡಿಸಬೇಕು ಎಂದು ಸೂಚಿಸಲಾಗಿದೆ.
"ಎ" ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಖಾತಾ ನೀಡಲು ಬೇಕಾದ ದಾಖಲೆಗಳು: ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94cc ಅಡಿ ನೀಡಲಾದ ಹಕ್ಕು ಪತ್ರ.
- ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ
- ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
- ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ
- ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
- ಮಾಲೀಕರ ಗುರುತಿನ ದಾಖಲೆ ಪ್ರತಿ
ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ದಾಖಲೆಗಳು:
- ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ 10-09-2024 ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು
- ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
- ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ
- ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
- ಮಾಲೀಕರ ಗುರುತಿನ ದಾಖಲೆ ಪ್ರತಿ
01-08-2023 ರಲ್ಲಿ ನಿರ್ದೇಶನಾಲಯದಿಂದ ಹೊರಡಿಸಲಾದ ಸುತ್ತೋಲೆಯಂತೆ ಇ-ಖಾತಾ ಪಡೆಯಲು ಅರ್ಜಿ ಸ್ವೀಕೃತವಾದ ಒಂದು ದಿನದಲ್ಲಿ ಸಹಾಯವ ದಾಖಲೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಇ-ಖಾತಾ ನಮೂನೆ 2/3 ಹಾಗೂ 2ಎ/ಡಿಎ ನೀಡಲು ನಗರ ಸ್ಥಳೀಯ ಸಂಸ್ಥೆಗಳಿಂದ ನಿಗದಿಪಡಿಸಲಾದ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಮಾಡಲು ಇರುವ ಗೊಂದಲಗಳಿಗೆ ಇಲ್ಲಿದೆ ಉತ್ತರ:
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಯಾವೆಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು?
ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 94 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 110 ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತುಪಡಿಸಿ ಉಳಿದಂತ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು.
"ಎ" ರಿಜಿಸ್ಟರ್‌ನಲ್ಲಿ ನಮೂದಿಸಬೇಕಾದ ಆಸ್ತಿಗಳು ಯಾವವು?
ಗ್ರಾಮ ಠಾಣಾ, ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಕಂದಾಯ ಇಲಾಖೆಯಿಂದ 94 cc ಅಡಿ ನೀಡಲಾದ ಹಕ್ಕು ಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಸ್ವತ್ತುಗಳು.
"ಬಿ" ರಿಜಿಸ್ಟರ್‌ನಲ್ಲಿ ನಮೂದಿಬೇಕಾದ ಆಸ್ತಿಗಳು ಯಾವವು?
ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನಗಳು/ಕಟ್ಟಡಗಳು, ಭೂ ಪರಿವರ್ತನೆಯಾಗದೇ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳು.
"ಬಿ" ರಿಜಿಸ್ಟರ್‌ನಲ್ಲಿ ದಾಖಲಿಸಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಆಥವಾ ದಂಡ ವಿಧಿಸಬೇಕೇ?
"ಬಿ" ರಿಜಿಸ್ಟರ್‌ನಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ 2ರಷ್ಟು ತೆರಿಗೆಯನ್ನು ನಂತರ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸುವುದು.
ಯಾವ ದಿನಾಂಕದವರೆಗೆ ಸೃಜನೆಯಾದ ಆಸ್ತಿಗಳನ್ನು "ಬಿ" ರಿಜಿಸ್ಟರ್‌ನಲ್ಲಿ ದಾಖಲಿಸಬೇಕು?
ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 106 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 112 (ಬಿ) ಗೆ 10-09-2024ರಲ್ಲಿ ತಿದ್ದುಪಡಿ ತರಲಾಗಿದ್ದು ಸದರಿ ತಿದ್ದುಪಡಿಯ ಪೂರ್ವದಲ್ಲಿ ಸೃಜಿಸಲಾದ ಅನಧಿಕೃತ ಆಸ್ತಿಗಳಲ್ಲಿ "ಬಿ" ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.
"ಬಿ" ರಿಜಿಸ್ಟರ್‌ನಲ್ಲಿ ದಾಖಲಿಸಲು ಪಡೆಯಬೇಕಾದ ದಾಖಲೆಗಳು ಯಾವುವು?
ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು.
ಯಾವ ವರ್ಷದಿಂದ "ಬಿ" ರಿಜಿಸ್ಟರ್‌ನಲ್ಲಿ ದಾಖಲಿಸುವ ಆಸ್ತಿಗಳಿಗೆ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ?
ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 106 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 112 (ಬಿ) ಗೆ ತಿದ್ದುಪಡಿ 10-09-2024ರಿಂದ ಜಾರಿಗೆ ಬಂದಿದ್ದು, 2024-25ನೇ ಸಾಲಿನಿಂದ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ.
"ಬಿ" ರಿಜಿಸ್ಟರ್‌ನಲ್ಲಿ ನಮೂದಿಸಲು ಅವಕಾಶವಿಲ್ಲದಿರುವ ಸ್ವತ್ತುಗಳು ಯಾವುವು.?
ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು, ಸರ್ಕಾರದ ನಿಗಮ ಮಂಡಳಿಗಳ ಜಾಗಗಳು, ನಗರ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿನ ಸ್ವತ್ತುಗಳು.
"ಬಿ" ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಉದೃತಾ/ಖಾತಾ ನೀಡಬಹುದೇ?
"ಬಿ" ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ 2ಎ/3ಎ ಸೃಜಿಸಿ ನೀಡಬಹುದಾಗಿದೆ.
ಅನಧಿಕೃತ ಸ್ವತ್ತುಗಳಿಗೆ ನಮೂನೆ 2ಎ/3ಎ ನೀಡಿದ್ದಲ್ಲಿ ಸಕ್ರಮಗೊಳಿಸಿದಂತಾಗುವುದೇ?
ಇಲ್ಲ. ಆಸ್ತಿ ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಪ್ರತ್ಯೇಕ ವಹಿಯಲ್ಲಿ ಅನಧಿಕೃತ ಸ್ವತ್ತುಗಳನ್ನು ದಾಖಲಿಸಿ ನಿರ್ವಹಿಸಲಾಗುತ್ತಿದೆ.
ಇ-ಖಾತಾ ಪಡೆಯಲು ಸಮಸ್ಯೆಗಳಿದ್ದಲ್ಲಿ ಯಾರನ್ನು ಸಂಪರ್ಕಿಸಬೇಕು?
ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಯನ್ನು ಸಂಪರ್ಕಿಸುವುದು.
ಇ-ಖಾತಾ ಪಡೆಯಲು ಸಮಸ್ಯೆಗಳಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಯಾರನ್ನು ಸಂಪರ್ಕಿಸಬೇಕು?
ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾದ ಸಹಾಯವಾಣಿ: 6366674001 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ಮುಂದೆ ಅನಧಿಕೃತ ಬಡಾವಣೆಗಳಿಗೆ ಕಿಂಚಿತ್ತೂ ಅವಕಾಶವಿಲ್ಲ: ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: ಇ-ಆಸ್ತಿ ತಂತ್ರಾಂಶದ ಮೂಲಕ ಆಸ್ತಿ ನಮೂನೆ ನೀಡಲು ರಾಜ್ಯ ಸರ್ಕಾರ ಸೂಚನೆ