ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿ ಬೆಂಗಳೂರು: ರಾಮಮಂದಿರ ವಿಚಾರ ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುತ್ತಾ, ರಾಮಮಂದಿರ ವಿಚಾರ ಪ್ರಸ್ತಾಪಿಸಿದ ಶಾಸಕ ಶಿವಲಿಂಗೇಗೌಡ, ನಾವೂ ಶ್ರೀರಾಮನ ದೇವಸ್ಥಾನ ಕಟ್ಟಿಸಿದ್ದೇವೆ, ನೀವೂ ಕಟ್ಟಿದ್ದೀರಿ. ಪ್ರಧಾನಿಯವರು ರಾಮಮಂದಿರ ಕಟ್ಟಿಸಿದ್ದಕ್ಕೆ ಅಭಿನಂದನೆಗಳು, ನಮ್ಮ ತಕರಾರಿಲ್ಲ ಎಂದರು.
ಈ ವೇಳೆ ಬಿಜೆಪಿ ಸದಸ್ಯರು ಜೈ ಶ್ರೀರಾಂ ಹೇಳುವಂತೆ ಶಿವಲಿಂಗೇಗೌಡರಿಗೆ ಒತ್ತಾಯಿಸಿದರು. ಆಗ ನಾನೂ ಜೈಶ್ರೀರಾಂ ಅಂತೀನಿ, ಬಿಜೆಪಿಯವ್ರಿಗೆ ಏನು ರಾಮನನ್ನು ಗುತ್ತಿಗೆ ಕೊಟ್ಟಿಲ್ಲ. ರಾಮಮಂದಿರ ಕಟ್ಟಲು ಜಾಗ ಕೊಟ್ಟಿದ್ದು ಪಿ.ವಿ.ನರಸಿಂಹರಾವ್. ನಾವೂ ಶ್ರೀರಾಮನ ಭಕ್ತರು, ನೀವಷ್ಟೇ ಅಲ್ಲ, ನಾವೂ ಪೂಜಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು. ನೀವು ರಾಮನ ಭಕ್ತರಲ್ಲ, ರಾವಣನ ಭಕ್ತರು ಅಂತ ಬಿಜೆಪಿ ಸದಸ್ಯರು ಟಕ್ಕರ್ ಕೊಟ್ಟರು. ಆಗ ಶಿವಲಿಂಗೇಗೌಡರು, ನಮಗೆ ಈಗ ಶ್ರೀರಾಮ ಚಂದ್ರ ದೇವರಲ್ಲ. ನಮ್ಮ ಸನಾತನ ಧರ್ಮದಿಂದ ನಮಗೆ ಶ್ರೀರಾಮ ದೇವರು. ನಾವು ಶ್ರೀರಾಮನ ಆಜ್ಞಾಪಾಲಕರು ಎಂದರು.
ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ, ನೀವು ನಿಮ್ಮ ಅಫಿಡವಿಟ್‌ನಲ್ಲಿ ಹೇಳಿದ್ದೀರಿ. ರಾಮ, ಸೀತೆ, ಲಕ್ಷ್ಮಣ ಕಾಲ್ಪನಿಕ ಅಂತ ಹೇಳಿದ್ದೀರಿ ಎಂದು ಶಿವಲಿಂಗೇಗೌಡ ವಿರುದ್ಧ ಮುಗಿಬಿದ್ದರು. ಇದಕ್ಕೆ ತಿರುಗೇಟು ನೀಡಿದ ಅವರು, ನಾವು ನಿಮಗಿಂತಲೂ ಅವತಾರ ಪುರುಷರು. ನಮಗೂ ಪೂಜೆ ಗೊತ್ತು, ನಿಮಗಿಂತ ಹೆಚ್ಚೇ ಪೂಜೆ ಮಾಡ್ತೀವಿ. ನಾವೂ ದೇವಸ್ಥಾನ ಕಟ್ಟಿದ್ದೇವೆ, ನೋಡಿ ಬನ್ನಿ ನಮ್ಮ ಕಡೆ. ದೇವರನ್ನು ನಿಮಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ನಾವೂ ರಾಮನ ಭಕ್ತರು, ನಾವೂ ಜೈ ಶ್ರೀರಾಂ ಅಂತೀವಿ ಎಂದು ತಿಳಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಶಾಸಕರ ನಡುವೆ ವಾಕ್ಸಮರ: ಮತ್ತೆ ಜೈ ಶ್ರೀರಾಮ್, ಜೈ ಭೀಮ್ ಘೋಷಣೆ
ಇದಕ್ಕೂ ಮುನ್ನ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿದ ವಿಚಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಾ, ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಪ್ರತಿಭಟಿಸಿದಾಗ, ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ನನ್ನ ವಿರುದ್ಧ ಎಫ್‍ಐಆರ್ ಹಾಕಿದ್ದಾರೆ ಎಂದರು. ಇದಕ್ಕೆ ಸಚಿವ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.