ಆರೋಪಿಯಿಂದ ₹1 ಕೋಟಿಯ ಮಾಲು ಜಪ್ತಿ (ETV Bharat) ಬೆಂಗಳೂರು:ವಿದೇಶಗಳಿಂದ ಚಾಕೊಲೇಟ್, ಬಿಸ್ಕಟ್, ಪಾನೀಯ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ(ಎಫ್ಎಸ್ ಎಸ್ಎಐ) ಸ್ಟಿಕ್ಟರ್ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್ ಹಾಗೂ ಮಾಲ್ಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಆರ್ಥಿಕ ಅಪರಾಧದಳ ಅಧಿಕಾರಿಗಳು ಬಂಧಿಸಿದ್ದಾರೆ.
ನರೇಂದ್ರ ಸಿಂಗ್(45) ಬಂಧಿತ ಆರೋಪಿ. ರಾಜಸ್ಥಾನ ಮೂಲದ ಈತ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಈತನಿಂದ 1 ಕೋಟಿ ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಐದಾರು ವರ್ಷಗಳಿಂದ ಈ ದಂಧೆಯಲ್ಲಿ ಸಕ್ರಿಯನಾಗಿದ್ದ. ವಿದೇಶಗಳಿಂದ ಚಾಕೊಲೇಟ್, ಬಿಸ್ಕತ್ ಹಾಗೂ ತಂಪುಪಾನೀಯ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದ್ದ.
ಹಡಗಿನ ಮೂಲದ ಮುಂಬೈ ಬಂದರಿಗೆ ತರಿಸಿಕೊಂಡು ಅಲ್ಲಿಂದ ವಾಹನಗಳ ಮೂಲಕ ನಗರಕ್ಕೆ ತರಿಸಿಕೊಳ್ಳುತ್ತಿದ್ದ. ಸುಧಾಮನಗರದಲ್ಲಿರುವ ಗೋದಾಮಿನಲ್ಲಿ ಶೇಖರಿಸಿಕೊಳ್ಳುತಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ವಿದೇಶದಿಂದ ನಗರಕ್ಕೆ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳಲು ವಾಮಮಾರ್ಗ ಅನುಸರಿಸಿದ್ದ ಆರೋಪಿಯು ಯಾವುದೇ ರೀತಿಯ ಸುಂಕ ಪಾವತಿಸದಿರುವುದು ಕಂಡುಬಂದಿದೆ. ಗೋದಾಮಿನಲ್ಲಿ ಶೇಖರಿಸಲಾದ ಆಹಾರ ಪದಾರ್ಥಗಳ ಮೇಲೆ ಎಫ್ಎಸ್ಎಸ್ಎಐ ಸ್ಟಿಕ್ಕರ್ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್ ಹಾಗೂ ಮಾಲ್ಗಳಿಗೆ ದುಬಾರಿ ಬೆಲೆಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಜರು ವೇಳೆ ಪರಾರಿಗೆ ಯತ್ನಿಸಿದ ಚಡ್ಡಿ ಗ್ಯಾಂಗ್: ಗುಂಡು ಹಾರಿಸಿ ಬಂಧಿಸಿದ ಮಂಗಳೂರು ಪೊಲೀಸರು - Police Shot Chaddi Gang Accused