ಬೆಂಗಳೂರು : ಭಯೋತ್ಪಾದನೆ ಕೃತ್ಯ ಎಸಗಲು ಪಿತೂರಿ ನಡೆಸಿದ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ಬಳಿಕ ಖುಲಾಸೆಯಾಗಿ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿದ್ದರೂ, ದೇಶ ತೊರೆಯಲು ಅವಕಾಶ ನೀಡದೆ ವಿದೇಶಿಯರ ಪ್ರತಿಬಂಧನ ಕೇಂದ್ರದಲ್ಲಿ (ಫಾರಿನರ್ಸ್ ಡಿಟೆನ್ಷನ್ ಸೆಂಟರ್) ಇರಿಸಿರುವುದನ್ನು ಪ್ರಶ್ನಿಸಿ ಪಾಕಿಸ್ತಾನದ ಪ್ರಜೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಕರಾಚಿಯ ಉತ್ತರ ನಿಜಮಾಬಾದ್‌ನ ನಿವಾಸಿ ಮೊಹಮ್ಮದ್ ಫಹದ್ (37) ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ವ್ಯಕ್ತಿ. ರಾಜ್ಯ ಸರ್ಕಾರ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ, ಬೆಂಗಳೂರಿನ ಸಂಡೆಕೊಪ್ಪದಲ್ಲಿರುವ ವಿದೇಶಿಯರ ಪ್ರತಿಬಂಧನ ಕೇಂದ್ರದ ಮೇಲ್ವಿಚಾರಕರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಿದ್ದಾರೆ.
ಇತ್ತೀಚೆಗೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಅರ್ಜಿ ಸಂಬಂಧ ಕೋರ್ಟ್ ಕಚೇರಿ ಎತ್ತಿರುವ ಕೆಲ ಆಕ್ಷೇಪಣೆಗಳನ್ನು ಸರಿಡಿಸಲು ಅರ್ಜಿದಾರರ ವಕೀಲರಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲೇನಿದೆ: ನನ್ನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಅವುಗಳಿಂದ ಹೈಕೋರ್ಟ್ ನನ್ನನ್ನು ಖುಲಾಸೆಗೊಳಿಸಿದೆ. ಜೈಲಿನಿಂದ ಬಿಡುಗಡೆಯಾದ ನಂತರ ನನ್ನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ನಿರ್ದಿಷ್ಟ ಆದೇಶ ಹೊರಡಿಸಿದೆ. ಆದರೂ ಜೈಲಿನಿಂದ ಸಂಡೆಕೊಪ್ಪದಲ್ಲಿರುವ ವಿದೇಶಿಯರ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಅಲ್ಲದೆ, ಕಳೆದ 18 ವರ್ಷಗಳಿಂದ (2006 ರಿಂದ) ನಾನು ಜೈಲಿನಲ್ಲಿ ಬಂಧಿಯಾಗಿದ್ದೆ. ಬಂಧನ ಅವಧಿಯಲ್ಲಿ ತಂದೆಯನ್ನು ಕಳೆದುಕೊಂಡೆ. ನನ್ನ ಕುಟುಂಬ ಸದಸ್ಯರ ಸ್ಥಿತಿಗತಿ ಹದಗೆಟ್ಟಿದೆ. ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಕುಟುಂಬದವರು 18 ವರ್ಷಗಳಿಂದ ನನಗಾಗಿ ಕಾಯುತ್ತಿದ್ದಾರೆ. ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಹೈಕೋರ್ಟ್ ಆದೇಶಿಸಿದ ನಂತರವೂ ಪ್ರತಿಬಂಧನ ಕೇಂದ್ರದಲ್ಲಿ ನನ್ನನ್ನು ಇರಿಸಿರುವುದು ಅನ್ಯಾಯ. ಹಲವು ಬಾರಿ ಮನವಿ ಮಾಡಿದರೂ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕೇಂದ್ರದ ಮೇಲ್ವಿಚಾರಕರಾಗಿರುವ ವಿದೇಶಿಯರ ಪ್ರಾದೇಶಿಕ ಆಯುಕ್ತರು ಕ್ರಮ ಜರುಗಿಸಿಲ್ಲ. ಆದ್ದರಿಂದ ವಾಘಾ ಗಡಿ ಅಥವಾ ಇನ್ಯಾವುದೇ ಮಾರ್ಗದ ಮೂಲಕ ತನ್ನನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ: ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸುತ್ತಿರುವ ಲಕ್ಷರ್- ಇ-ತೋಯ್ಬಾದಿಂದ ಶಸ್ತ್ರಾಸ್ತ್ರಗಳನ್ನು ಪಡೆದು ಅಕ್ರಮವಾಗಿ ಸಂಗ್ರಹಿಟ್ಟಿರುವ ಆರೋಪ ಸಂಬಂಧ ಬೆಂಗಳೂರಿನ ನಂಜಪ್ಪ ಲೇಔಟ್‌ನಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು 2012ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿರಬೇಕಾದರೆ ರೆಹಮಾನ್ ಸಂಪರ್ಕಕ್ಕೆ ಬಂದಿದ್ದ ಪಾಕಿಸ್ತಾನಿ ಪ್ರಜೆಯಾದ ಅರ್ಜಿದಾರ ಮೊಹಮ್ಮದ್ ಫಹದ್, ಧಾರ್ಮಿಕ ಮೂಲಭೂತವಾದವನ್ನು ಬೋಧಿಸಿದ್ದರು. ಹಿಂದೂ ಧರ್ಮದ ಬಗ್ಗೆ ದ್ವೇಷ ಭಾವನೆ ಬೆಳೆಸಿದ್ದಾರೆ. ಪಾಕಿಸ್ತಾನ ಮತ್ತು ಯುಎಇನಿಂದ ಕಾರ್ಯನಿರ್ವಹಿಸುತ್ತಿರುವ ಲಕ್ಷರ್ ಎ-ತೋಯ್ಬಾಗೆ (ಎಲ್‌ಇಟಿ) ಪರಿಚಯಿಸಿದ್ದಾರೆ ಎಂಬ ಆರೋಪವಿತ್ತು. ಜಾಮೀನು ಮೇಲೆ ಬಿಡುಗಡೆಯಾದ ನಂತರ ಅಬ್ದುಲ್ ರೆಹಮಾನ್ ಎಲ್‌ಇಟಿಗೆ ಯುವಕರನ್ನು ಸೇರಿಸಲು ಹಣಕಾಸು ಸಂಗ್ರಹಿಸಿ, ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸಲು, ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಲು ಸಂಚು ರೂಪಿಸಲು ಎಲ್‌ಇಟಿ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಕುರಿತು ಅಬ್ದುಲ್ ರೆಹಮಾನ್ ಹಾಗೂ ಫಹದ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.
ಎನ್‌ಐಎ ವಿಶೇಷ ನ್ಯಾಯಾಲಯದಿಂದ ಶಿಕ್ಷೆ : ಕ್ರಿಮಿನಲ್ ಪಿತೂರಿ, ಕಾನೂನು ಬಾಹಿರ ಚುಟುವಟಿಕೆ, ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಪಿತೂರಿ ನಡೆಸಿದ, ಹಣಕಾಸು ಸಂಗ್ರಹಿಸಿದ, ಪ್ರಾಣ ಹಾಗೂ ಆಸ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟ ಅಪರಾಧದಡಿ ಅಬ್ದುಲ್ ರೆಹಮಾನ್ ಹಾಗೂ ಮೊಹಮ್ಮದ್ ಫಹದ್ ಅವರನ್ನು ತಪ್ಪಿತಸ್ಥರು ಎಂಬುದಾಗಿ 2023ರ ಫೆಬ್ರವರಿಯಲ್ಲಿ ತೀರ್ಮಾನಿಸಿದ ಬೆಂಗಳೂರಿನ ಎನ್‌ಐಎ ವಿಶೇಷ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್‌ನಲ್ಲಿ ಖುಲಾಸೆ :ಈ ಆದೇಶ ಪ್ರಶ್ನಿಸಿ ಫಹದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಫಹದ್ ಅವರನ್ನು ಖುಲಾಸೆಗೊಳಿಸಿ 2024ರ ಸೆ.24ರಂದು ಹೈಕೋರ್ಟ್ ಆದೇಶಿಸಿತ್ತು. ಅಲ್ಲದೆ, ಜೈಲಿನಿಂದ ಬಿಡುಗಡೆಯಾದ ನಂತರ ಫಹದ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆದೇಶಿಸಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಫಹದ್ ಅವರನ್ನು ಬೆಂಗಳೂರಿನ ಸಂಡೆಕೊಪ್ಪದಲ್ಲಿರುವ ವಿದೇಶಿಯರ ಪ್ರತಿಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪತ್ನಿ, ಸಂಬಂಧಿಕರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ