ರಾಮನಗರ:ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕಾಗಿ ಪ್ರಿಯಕರನ ಜೊತೆ ಸೇರಿಕೊಂಡು ಪುಟ್ಟ ಕಂದಮ್ಮಗಳನ್ನು ಸಾಯಿಸಿರುವ ಆರೋಪ ಪ್ರಕರಣ ರಾಮನಗರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತ ಮಕ್ಕಳ ತಂದೆಯ ದೂರಿನಂತೆ, ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ಕಬೀಲಾ (2), ಕಬೀಲನ್ (11) ತಿಂಗಳು ಸಾವನ್ನಪ್ಪಿರುವ ಪುಟ್ಟ ಕಂದಮ್ಮಗಳು. ಕೊಲೆ ಆರೋಪಿಗಳು ಮೂಲತಃ ಬೆಂಗಳೂರು ಎ.ಕೆ. ಕಾಲೋನಿಯ ನಿವಾಸಿಗಳಾಗಿದ್ದು, ರಾಮನಗರ ಟೌನ್ನ ಮಂಜುನಾಥ್ ನಗರದಲ್ಲಿ ವಾಸವಾಗಿದ್ದರು. ಸ್ವೀಟಿ, (24) ಗ್ರೆಗೋರಿ ಫ್ರಾನ್ಸಿಸ್(27) ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ.
ಮೃತ ಮಕ್ಕಳ ತಂದೆ ನೀಡಿದ ದೂರಿನ ಪ್ರಕಾರ: ಅಕ್ಟೋಬರ್ 12ರಂದು ಮೃತ ಮಕ್ಕಳ ತಂದೆ ಶಿವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ, "4 ವರ್ಷದ ಹಿಂದೆ ಸ್ವೀಟಿಯನ್ನು ಮದುವೆಯಾಗಿದ್ದು ನಮಗೆ ಕಬಿಲಾ (2 ವರ್ಷ) ಮತ್ತು ಕಬಿಲನ್ (11 ತಿಂಗಳು) ಇಬ್ಬರು ಗಂಡು ಮಕ್ಕಳಿದ್ದರು. ನನ್ನ ಹೆಂಡತಿ ಸ್ವೀಟಿ ಮನೆ ಕೆಲಸ ಮಾಡುತ್ತಿದ್ದಳು. ಜುಲೈ 30ರಂದು ನನ್ನ ಹೆಂಡತಿ ಇದ್ದಕ್ಕಿದ್ದಂತೆ ನನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಎಲ್ಲಿಗೋ ಹೊರಟು ಹೋಗಿದ್ದಳು. ನಂತರ ಒಂದೂವರೆ ತಿಂಗಳು ಬಿಟ್ಟು ಮನೆಗೆ ಒಬ್ಬಳೆ ಬಂದಿದ್ದಳು. ನನ್ನ ಮಕ್ಕಳನ್ನು ಎಲ್ಲಿ ಎಂದು ಕೇಳಿದ್ದಕ್ಕೆ ಹಾಸ್ಟೆಲ್ನಲ್ಲಿ ಇದ್ದಾರೆ ಎಂದು ಹೇಳಿದ್ದಳು".
"ನಂತರ ನೋಡೋಣಾ ಎಂದು ಹೋದಾಗ ಕಬೀಲಾನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆನಂತರ ನಾವು ಮಕ್ಕಳನ್ನು ಅಲ್ಲಿಂದ ವಾಪಸ್ ಮನೆಗೆ ಕರೆದುಕೊಂಡು ಬಂದು, ಸ್ವೀಟಿಯನ್ನು ಯಾಕೆ ಮನೆಯಿಂದ ಹೋಗಿದ್ದಿ ಎಂದು ಕೇಳಿದಕ್ಕೆ 'ನೀನು ಬ್ಯಾಂಕ್ನಲ್ಲಿ ಇಟ್ಟಿದ್ದ ದುಡ್ಡನ್ನು ನಾನು ತೆಗೆದುಕೊಂಡು ಖರ್ಚು ಮಾಡಿಕೊಂಡಿರುತ್ತೇನೆ. ಅದಕ್ಕೆ ನೀವು ಏನಾದರೂ ಮಾಡುತ್ತೀರಾ ಅಂತಾ ರಾಮನಗರಕ್ಕೆ ಹೊರಟು ಹೋಗಿದ್ದೆ. ಇನ್ನು ಮುಂದೆ ಈ ರೀತಿ ಮಾಡಲ್ಲ' ಎಂದು ಹೇಳಿ ಒಂದು ವಾರ ಮನೆಯಲ್ಲಿಯೇ ಇದ್ದಳು".
"ಮನೆಯಲ್ಲಿ ಇದ್ದ ವೇಳೆ ಅವಳು ತೆಗೆದುಕೊಂಡು ಬಂದಿದ್ದ ಬ್ಯಾಗ್ನಲ್ಲಿ ಗ್ರೆಗೊರಿ ಪ್ರಾನ್ಸಿಸ್ ಎಂಬುವನ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಳು. ಅದನ್ನು ನೋಡಿ ಆಧಾರ್ ಕಾರ್ಡ್ನಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ ಅವನು ತಾನು ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅದಕ್ಕೆ ಅವಳಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಈಗ ವಾಪಸ್ ಅವರ ತಂಟೆಗೆ ಬರಬೇಡಿ ಸುಮ್ಮನಿರಿ ಎಂದು ಹೇಳಲಾಗಿತ್ತು".