ಬೆಂಗಳೂರು:ಆನ್‌ಲೈನ್ ಟ್ರೇಡಿಂಗ್ ಚಟಕ್ಕೆ ಬಿದ್ದಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು 20 ಲಕ್ಷ ರೂಪಾಯಿ ಕಳೆದುಕೊಂಡು ಸಾಲ ತೀರಿಸಲಾಗದೇ ಮನೆಬಿಟ್ಟು ಹೋಗಿರುವ ಕುರಿತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದಿನಪಾಳ್ಯದಲ್ಲಿ ನಿವಾಸಿ ಭರತ್(32)ನಾಪತ್ತೆಯಾದವರು. ಆನ್‌ಲೈನ್ ಟ್ರೇಡಿಂಗ್ ಚಟಕ್ಕೆ ಬಿದ್ದಿದ್ದ ಭರತ್ ಬ್ಯಾಂಕ್ ಸೇರಿ ಇತರ ಕಡೆ ಸುಮಾರು 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಪುಸ್ತಕದಲ್ಲಿ ಬರೆದಿಟ್ಟು ಬೈಕ್‌ನಲ್ಲಿ ಮನೆಬಿಟ್ಟು ತೆರಳಿದ್ದು, ನಾಪತ್ತೆಯಾಗಿದ್ದಾರೆ. ಇತ್ತ ಭರತ್‌ಗಾಗಿ ಅವರ ಪತ್ನಿ ಎಲ್ಲ ಕಡೆ ಹುಡುಕಾಟ ನಡೆಸಿ, ಸಿಗದೆ ಇದ್ದಾಗ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾಪತ್ತೆಯಾದವರ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಪತಿ ಭರತ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, 2 ದಿನಗಳಿಂದ ಮನೆಗೆ ಬಾರದೇ ಫೋನ್ ಸಂಪರ್ಕದಲ್ಲಿದ್ದರು. ಅ.9 ರಂದು ಬೆಳಗ್ಗೆ 7 ಗಂಟೆಯಲ್ಲಿ ಕಾರ್ ಪಾರ್ಕಿಂಗ್ ಜಾಗದಲ್ಲಿ ಬಂದಾಗ ಒಂದು ಪುಸ್ತಕ ಸಿಕ್ಕಿದ್ದು, ಅದರಲ್ಲಿ ನನ್ನ ಸಾಲ ಹೆಚ್ಚಾಗಿದೆ. ಎಲ್ಲ ಇಎಂಐ ಕಮಿಟ್ಮೆಂಟ್ಸ್ ಕಟ್ಟಲು ಸಾಧ್ಯವಾಗುತ್ತಿಲ್ಲ. ನಾನು ಜೀವನದಲ್ಲಿ ಸೋತಿದ್ದೇನೆ ಎಂದು ಬರೆದಿರುವುದು ಕಂಡು ಬಂದಿದ್ದು, ನಾಪತ್ತೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಪೊಲೀಸರಿಗೆ ದೂರಿನಲ್ಲಿ ಮನವಿ ಮಾಡಿದ್ದಾರೆ.