ಮೈಸೂರು: ತನ್ನ ಜೊತೆ ಮದುವೆ ನಿಶ್ಚಯವಾಗಿದ್ದ ಯುವತಿಯನ್ನೇ ಕೊಂದು ಆರೋಪಿ ಪೊಲೀಸರಿಗೆ ಶರಣಾದ ಘಟನೆ ಹೆಚ್. ಡಿ. ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಕವಿತಾ (20) ಕೊಲೆಯಾದ ಯುವತಿ. ನಿರಂಜನ್ ಅಲಿಯಾಸ್ ಜಗ್ಗ ಕೊಲೆ ಆರೋಪಿ.
ಹತ್ಯೆಗೀಡಾದ ಕವಿತಾಳಿಗೆ ಅ. 21ಕ್ಕೆ ನಿರಂಜನ ಜೊತೆಗೆ ಮದುವೆ ನಿಗದಿಯಾಗಿತ್ತು. ಶುಕ್ರವಾರ ಕವಿತಾ ಪೋಷಕರು ಜಮೀನಿಗೆ ಹೋದಾಗ ನಿರಂಜನ ಮನೆಗೆ ಬಂದು ಆಕೆಯನ್ನು ಕೊಲೆಗೈದು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮನೆಯ ಮೇಲ್ಛಾವಣಿ ತೆಗೆದು ಪರಾರಿಯಾಗದ್ದ. ಈ ದೃಶ್ಯವನ್ನು ಕಂಡ ನೆರೆಹೊರೆಯವರು ತಕ್ಷಣ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕವಿತಾಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಪೋಷಕರು ಮನೆ ಬಂದು ನೋಡಿದಾಗ ಕವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿ ಶುಕ್ರವಾರ ಸಂಜೆ ಕವಿತಾಳ ಮನೆಯಿಂದ ನೇರವಾಗಿ ಅಂತರಸಂತೆ ಪೊಲೀಸ್ ಠಾಣೆಗೆ ಬಂದು, ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿ ನನಗೆ ಜನರಿಂದ ರಕ್ಷಣೆ ಕೊಡಿ ಮನವಿ ಮಾಡಿದ್ದ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.