ಹಾವೇರಿ:ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸನ್ನು ವಿಶೇಷವಾಗಿ ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ರೈತರೊಬ್ಬರು ತಮ್ಮ ಅಡಕೆ ತೋಟದಲ್ಲಿ ಕಾಳುಮೆಣಸು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಗ್ರಾಮದ ಸಂಜೀವಯ್ಯ ಚೆನ್ನಬಸವಯ್ಯ ಕಬ್ಬಿಣಕಂತಿಮಠ ಯುವ ರೈತ ಕಾಳುಮೆಣಸು ಬೆಳೆದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸಂಜೀವಯ್ಯ ಈ ಬಗ್ಗೆ ಪ್ರಗತಿಪರ ರೈತರಲ್ಲಿ ಒಬ್ಬರಾದ ಮಾಲತೇಶ ಪೂಜಾರ್ ಬಳಿ ಚರ್ಚಿಸಿದ್ದರು. ಇಬ್ಬರು ಕಾಳುಮೆಣಸು ಬೆಳೆಯಲು ಮುಂದಾದಗ ಬಹಳಷ್ಟು ಜನ ನಷ್ಟ ಅನುಭವಿಸುತ್ತೀರಿ ಎಂದು ಸಲಹೆ ನೀಡಿದ್ದರು. ಆದರೂ ಯಾಕೆ ಪ್ರಯೋಗ ಮಾಡಬಾರದು ಎಂದು ಸಂಜೀವಯ್ಯ ಶಿರಸಿಗೆ ತೆರಳಿ ಅಲ್ಲಿ 12 ರೂಪಾಯಿಗೆ ಒಂದರಂತೆ ಕಾಳುಮೆಣಸು ಸಸಿ ತಂದು ತಮ್ಮ ಮೂರು ಎಕರೆ ಅಡಕೆ ತೋಟದಲ್ಲಿ ನಾಟಿ ಮಾಡಿದ್ದಾರೆ.
ಬರೋಬ್ಬರಿ 1200 ಸಸಿ ತಂದು ಅಡಕೆ ತೋಟದಲ್ಲಿ ನೆಟ್ಟಿದ್ದಾರೆ. ಇದೀಗ ಈ ಸಸಿಗಳಿಗೆ ಎರಡು ವರ್ಷವಾಗಿದ್ದು, ಕಾಳುಮೆಣಸು ಫಸಲು ನೀಡಲಾರಂಭಿಸಿದೆ. ಪ್ರತಿಯೊಂದು ಸಸಿಯಿಂದ ವರ್ಷಕ್ಕೆ ಒಂದು ಕೆಜಿಯಿಂದ ಐದು ಕೆಜಿಯವರೆಗೆ ಫಸಲು ಬರುವ ನಿರೀಕ್ಷೆಯಲ್ಲಿ ಸಂಜೀವಯ್ಯ ಕಬ್ಬಿಣಕಂತಿಮಠ ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಎಕರೆಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಬರುತ್ತದೆ. ಆದರೆ, ನಮ್ಮಲ್ಲಿ ವರ್ಷಕ್ಕೆ ಒಂದು ಎಕರೆಗೆ ಮೂರು ಲಕ್ಷ ಆದಾಯ ಬಂದರೆ ಸಾಕು ಎನ್ನುತ್ತಿದ್ದಾರೆ ಸಂಜೀವಯ್ಯ. ಸಸಿ ನೆಟ್ಟು ಆರು ಅಡಿ ಆಗುವವರೆಗೆ ಸ್ವಲ್ಪ ಜೋಪಾನ ಮಾಡಬೇಕು. ಆದಾದ ನಂತರ ಬಳ್ಳಿ ಅಡಕೆ ಮರಗಳಿಗೆ ತಾನೇ ಅಂಟಿಕೊಳ್ಳಲಾರಂಭಿಸುತ್ತದೆ. ಐದು ಟಿಸಿಲುಗಳಿಂದ ಹಿಡಿದು 25 ಟಿಸಿಲುಗಳಾಗಿ ಅಡಕೆ ಮರಗಳಿಗೆ ಕಾಳುಮೆಣಸು ಅಂಟಿಕೊಳ್ಳುತ್ತದೆ.