ಪ್ರಭಾರ ಜಿಲ್ಲಾ ವರಿಷ್ಠಾಧಿಕಾರಿ ಹೇಳಿಕೆ (ETV Bharat) ಬೆಳಗಾವಿ:ಸಾಲ ಮರಳಿಸಲು ವಿಳಂಬ ಆಗಿದ್ದಕ್ಕೆ ಪತ್ನಿ-ಪುತ್ರನನ್ನು ಗೃಹಬಂಧನದಲ್ಲಿ ಇರಿಸಿದ್ದರಿಂದ ಮನನೊಂದು ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ. ರಾಜು ಖೋತಗಿ ಆತ್ಮಹತ್ಯೆ ಮಾಡಿಕೊಂಡ ರೈತ. ಯಮಕನಮರಡಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.
ಜೀವನ ನಿರ್ವಹಣೆಗೆ ಸಿದ್ದವ್ವ ಬಳಿ ಐದು ತಿಂಗಳ ಹಿಂದೆ ರಾಜು ಖೋತಗಿ ಒಂದೂವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಸಹ ತುಂಬುತ್ತಿದ್ದರು. ಎರಡು ದಿನಗಳ ಹಿಂದೆ ಏಕಾಏಕಿ ಮನೆಗೆ ಕರೆದು ಕೊಟ್ಟ ಸಾಲ ಮರಳಿಸುವಂತೆ ಸಿದ್ದವ್ವ ತಾಕೀತು ಮಾಡಿದ್ದಾಳೆ. ಈ ವೇಳೆ ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶವನ್ನು ರಾಜು ಖೋತಗಿ ಕೇಳಿದ್ದರು. ಇದಕ್ಕೆ ಒಪ್ಪದೇ ಸಾಲ ಮರಳಿಸುವವರೆಗೂ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗುವಂತೆ ಸಿದ್ದವ್ವ ಆವಾಜ್ ಹಾಕಿದ್ದಾಳೆ ಎಂದು ದೂರಲಾಗಿದೆ.
ಸಂಜೆಯಾದರೂ ಪುತ್ರನನ್ನು ಬಿಡದೇ ಇದ್ದಾಗ, ಸಿದ್ದವ್ವಳ ಮನೆಗೆ ರಾಜು ಮತ್ತು ಆತನ ಪತ್ನಿ ದುರ್ಗವ್ವ ಹೋಗಿದ್ದಾರೆ. ಈ ವೇಳೆ ಬಸವರಾಜ್‌ನನ್ನು ಬಿಟ್ಟು ರಾಜು ಖೋತಗಿ, ದುರ್ಗವ್ವರನ್ನು ಮನೆಯಲ್ಲಿ ಕೂರಿಸಿಕೊಳ್ಳಲಾಗಿದೆ. ಮರುದಿನ ರಾಜುನನ್ನು ಬಿಟ್ಟು ಬಸವರಾಜ್, ದುರ್ಗವ್ವರನ್ನು ಗೃಹಬಂಧನದಲ್ಲಿ ಇರಿಸಿಕೊಂಡಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಮನನೊಂದು ಮನೆಗೆ ಬಂದ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಭೀಕರ ಬರಕ್ಕೆ ಬೆಳೆದಿದ್ದ ಬೆಳೆಗಳು ಕೈಕೊಟ್ಟು ಉಪಜೀವನಕ್ಕೆ ಸಿದ್ದವ್ವನ ಬಳಿ, ರೈತ ರಾಜು ಸಾಲ ಪಡೆದಿದ್ದ. ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ, ಬಡ್ಡಿ ಮೇಲೆ ಸಾಲ ನೀಡಿದ್ದ ಮಹಿಳೆ ಸಿದ್ದವ್ವ ಈ ರೀತಿ ಅಮಾನವೀಯವಾಗಿ ನಡೆಸಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಅನ್ಯಾಯದ ವಿರುದ್ಧ ದೂರು ದಾಖಲಿಸಿಕೊಳ್ಳದೇ ಪೊಲೀಸರು ಸತಾಯಿಸಿರುವ ಆರೋಪವೂ ಇದೇ ವೇಳೆ ಕೇಳಿ ಬಂದಿದೆ.
ಜಿಲ್ಲಾ ವರಿಷ್ಠಾಧಿಕಾರಿ ಹೇಳಿದ್ದೇನು?:ಪ್ರಕರಣ ಕುರಿತು ಬೆಳಗಾವಿಯಲ್ಲಿ ಪ್ರಭಾರ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ದೂರಿನಂತೆ ಮಾಹಿತಿ ನೀಡಿದ್ದಾರೆ. "ಪ್ರಕರಣದ ಕುರಿತಂತೆ ಮೃತ ರಾಜು ಖೋತಗಿಯವರ ಪತ್ನಿ ದೂರು ಕೊಟ್ಟಿದ್ದಾರೆ. ಅವರು ಕೊಟ್ಟ ದೂರಿನನ್ವಯ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಎರಡು ಚೆಕ್ ಪಡೆದು ಸಿದ್ದವ್ವ ಬಯ್ಯನ್ನವರ ಒಂದೂವರೆ ಲಕ್ಷವನ್ನು ಸಾಲವಾಗಿ ಕೊಟ್ಟಿದ್ದರು. ಕೊಟ್ಟ ಸಾಲ ಮರಳಿಸಿ ಕೊಡಿ ಎಂದು ಚಿತ್ರಹಿಂಸೆ ಕೊಟ್ಟಿದ್ದು, ಇದರಿಂದ ಮನನೊಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ದೂರು ನೀಡಿದ್ದಾರೆ. ಪ್ರಕರಣದ ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ" ಎಂದು ಹೇಳಿದ್ದಾರೆ.
ಜತೆಗೆ, ಆತ್ಮಹತ್ಯೆ ಮಾಡಿಕೊಂಡ ರಾಜು ಪತ್ನಿ ದುರ್ಗವ್ವ ಹಾಗೂ ಮಗ ಬಸವರಾಜ್ ಗೃಹ ಬಂಧನಕ್ಕೆ ಸಂಬಂಧಿಸಿದಂತೆಯೂ ಆರೋಪಿಗಳ ವಿಚಾರಣೆ ನಡೆದಿದೆ. ಈ ಬಗ್ಗೆಯೂ ತನಿಖೆ ಆಗುತ್ತಿದೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದ ಅವರು, 'ಪೊಲೀಸರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಆಗುತ್ತದೆ'. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಮಾಧ್ಯಮಗಳ ಪ್ರಶ್ನೆಗೆ ಬಿ.ಎಸ್. ನೇಮಗೌಡ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಅಂಜಲಿ ಕೊಲೆ ಪ್ರಕರಣ: ಮತ್ತೊಬ್ಬ ಅಧಿಕಾರಿ ತಲೆದಂಡ, ಎಸಿಪಿ ಅಮಾನತು - ACP Suspended