ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಕೇಂದ್ರ ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ ಸಿಕ್ಕಿದೆ. ನಾಲ್ವರು ಸಂಸದರು ಹಾಗೂ ಓರ್ವ ರಾಜ್ಯಸಭಾ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ನೀಡುತ್ತಿದ್ದು, ಇಂದು ಸಂಜೆ ಮೋದಿ ಜೊತೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ.
ಸಂಜೆ 7:15ಕ್ಕೆ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಮೋದಿ 3.0 ಸರ್ಕಾರದಲ್ಲಿ ರಾಜ್ಯದಿಂದ ಎನ್ಡಿಎ ಮೈತ್ರಿಕೂಟಕ್ಕೆ 5 ಸ್ಥಾನಗಳನ್ನ ನೀಡಲಾಗಿದೆ. ಬಿಜೆಪಿ ಕೋಟಾದ ಅಡಿಯಲ್ಲಿ ಹಾಲಿ ಸಚಿವರಾಗಿದ್ದ ಪ್ರಲ್ಹಾದ್ ಜೋಶಿಯವರನ್ನ ಪುನಃ ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದು, ಹಣಕಾಸು ಸಚಿವೆಯಾಗಿದ್ದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೊಮ್ಮೆ ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಇದರ ಜೊತೆಗೆ ರಾಜ್ಯ ಖಾತೆ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಮತ್ತೊಂದು ಅವಕಾಶ ನೀಡುತ್ತಿದ್ದು, ಪ್ರಥಮ ಬಾರಿಗೆ ಸಂಸತ್ ಪ್ರವೇಶ ಮಾಡಿರುವ ಹಿರಿಯ ನಾಯಕ ವಿ ಸೋಮಣ್ಣ ಅವರಿಗೂ ಸ್ಥಾನ ನೀಡಲಾಗುತ್ತಿದೆ. ಇನ್ನು ಮಿತ್ರ ಪಕ್ಷವಾದ ಜೆಡಿಎಸ್ನ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಂಪುಟದಲ್ಲಿ ಸ್ಥಾನ ಲಭಿಸುತ್ತಿದೆ.