ಕರ್ನಾಟಕ

karnataka

ETV Bharat / state

ಬೆಲೆಕೇರಿ ಅಕ್ರಮ ಗಣಿ ಅದಿರು ಪ್ರಕರಣ: ಅದಾನಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಬೇಕು - ಬಿ.ಕೆ.ಹರಿಪ್ರಸಾದ್ - B K HARIPRASAD

ಬೆಲೆಕೇರಿ ಅಕ್ರಮ ಗಣಿ ಅದಿರು ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಅನುಸಾರ ಅದಾನಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಎಲ್​ಸಿ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್ (ETV Bharat)

By ETV Bharat Karnataka Team

Published : Dec 7, 2024, 10:52 PM IST

ಬೆಂಗಳೂರು:ಬೆಲೆಕೇರಿ ಅಕ್ರಮ ಗಣಿ ಅದಿರು ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಅನುಸಾರ ಅದಾನಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಲೆಕೇರಿ ಅಕ್ರಮ ಅದಿರು ಕಳ್ಳ ಸಾಗಾಣೆ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 8,05,991.083 ಟನ್ ಅಕ್ರಮ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಅದಿರನ್ನು ಅದಾನಿ ಕಂಪನಿಯವರು ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡಿರುತ್ತಾರೆ. ಅದರಲ್ಲಿ ಮಲ್ಲಿಕಾರ್ಜುನ ಶಿಪ್ಪಿಂಗ್, ಅದಾನಿ ಎಂಟರ್ ಪ್ರೈಸಸ್, ಸಲ್ಗಾಂವಕರ್ ಮೈನಿಂಗ್ ಇಂಡಸ್ಟ್ರಿ ಮತ್ತು ರಾಜ್ ಮಹಲ್ ಕಂಪನಿಗಳು ಈ ಅದಿರನ್ನು ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡುತ್ತಿರುವುದನ್ನು ಲೋಕಾಯುಕ್ತ ತನಿಖೆಯಲ್ಲಿ ಪತ್ತೆಯಾಗಿತ್ತು. ಎಲ್ಲಾ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆಯೂ ಲೋಕಾಯುಕ್ತ ಸಂಸ್ಥೆ ಶಿಫಾರಸು ನೀಡಿತ್ತು ಎಂದರು.

ಅದಾನಿ ಕಂಪನಿ ಹೊರತಾಗಿ ಇತರೆ ಮೂರು ಕಂಪನಿ ವಿರುದ್ಧ ಸಿಬಿಐ ಚನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಸದ್ಯ ಈ ಶಿಕ್ಷೆಯನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದೆ. ಆದರೆ ಈ ಮೂರು ಕಂಪನಿಗಳಿಗಿಂತ ಘೋರ ಆರೋಪ ಎದುರಿಸುತ್ತಿರುವ ಅದಾನಿ ಕಂಪನಿ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದರು.

ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಅದಾನಿ ಕಂಪನಿ ಲಂಚ ನೀಡಿ, ಈ ಅಕ್ರಮ ಅದಿರು ಸಾಗಾಣೆ ಮಾಡುತ್ತಿತ್ತು ಎಂಬ ಆರೋಪದ ಬಗ್ಗೆ ವಿಚಾರಣೆ ನಡೆದಿಲ್ಲ. ಲೋಕಾಯುಕ್ತರು ಅದಾನಿ ಕಂಪನಿ ಕಂಪ್ಯೂಟರ್ ವಶಪಡಿಸಿಕೊಂಡಾಗ ಅದರಲ್ಲಿ ಕಂಪನಿಯವರು ಈ ಶಾಖೆಗೆ ಕಳುಹಿಸಿರುವ ಮೇಲ್​ನಲ್ಲಿ ಯಾವ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಹಣ ನೀಡಬೇಕು ಎಂಬ ವಿವರಗಳು ಇರುತ್ತವೆ ಎಂದು ಲೋಕಾಯುಕ್ತ ವರದಿಯ 51ನೇ ಪುಟದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಬೇರೆ ಕಂಪನಿಗಳ ವಿರುದ್ಧ ಲೋಕಾಯುಕ್ತ ಹಾಗೂ ಸಿಬಿಐ ಸಂಸ್ಥೆಗಳು ಕ್ರಮ ಕೈಗೊಂಡಿರುವ ರೀತಿಯಲ್ಲಿ ಅದಾನಿ ಕಂಪನಿ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅದಾನಿ ಕಂಪನಿ ಮೋದಿ ಅವರ ಕೃಪಾಪೋಷಿತ ಕಂಪನಿಯಾಗಿದ್ದು, ದೇಶದಲ್ಲಿ ಏನೇ ಅವ್ಯವಹಾರ ಮಾಡಿದರೂ ಈ ಕಂಪನಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ತನಿಖೆಯಾಗಿರುವ ವರದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅದಾನಿ ಕಂಪನಿ ಸಮೂಹ ಕರ್ನಾಟಕ ರಾಜ್ಯದ ಸಂಪತ್ತನ್ನು ಕಳ್ಳಸಾಗಾಣಿಕೆ ಮಾಡುವಾಗ ಅರಣ್ಯ ಇಲಾಖೆಗಳು ಮುಟ್ಟುಗೋಲು ಹಾಕಿಕೊಂಡಿರುವುದು ಸ್ಪಷ್ಟವಾಗಿದೆ. ಈ ಕಂಪನಿಗಳ ವಿರುದ್ಧ ಲೋಕಾಯುಕ್ತ ವರದಿಯಂತೆ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ. ಅಮೆರಿಕದಲ್ಲಿ ಅದಾನಿ ಅವರ ಮೇಲೆ ಪ್ರಕರಣ ದಾಖಲಿಸುವಾಗ ರಾಜ್ಯದಲ್ಲಿ ನಮ್ಮ ಸಂಪತ್ತು ಲೂಟಿ ಮಾಡಿರುವ ಪ್ರಕರಣವನ್ನು ಮುಟ್ಟದಿದ್ದರೆ ಎಲ್ಲರ ಮೇಲೂ ಸಂಶಯ ಬರುವಂತಾಗುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಿದ್ದರೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಐವಿ ಫ್ಲ್ಯೂಯೆಡ್‌ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು: ಸಚಿವ ದಿನೇಶ್​ ಗುಂಡೂರಾವ್​

ABOUT THE AUTHOR

...view details