ತುಮಕೂರು:ಯೋಧನೊಬ್ಬ ತನ್ನ ಮನೆಗೆ ತೆರಳಲು ದಾರಿ ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಐವರು ಬಿಯರ್ ಬಾಟಲಿನಿಂದ ಯೋಧನಿಗೆ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ನಡೆದಿದೆ.
ರಾಯವಾರ ಗ್ರಾಮದ ಯೋಧ ಗೋವಿಂದರಾಜು ತಲೆ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಭಾರತೀಯ ಭೂಸೇನೆ ಸಿಪಾಯಿಯಾಗಿ ರಾಜೋರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೋವಿಂದರಾಜು, ರಜೆ ಪ್ರಯುಕ್ತ ಸ್ವಗ್ರಾಮಕ್ಕೆ ಆಗಮಿಸಿದ್ದರು. ಬೈರೇನಹಳ್ಳಿಗೆ ತೆರಳಿ ಮನೆಗೆ ಹಿಂತಿರುಗುವಾಗ ಯುವಕರ ಗುಂಪು ಹಲ್ಲೆ ನಡೆಸಿದೆ.
ಅಣ್ಣ ದಾರಿ ಬಿಡಿ, ನಾನು ಮನೆಗೆ ಹೋಗಬೇಕಿದೆ ಎಂದು ಗೋವಿಂದರಾಜು ಅವರು ರಸ್ತೆಗೆ ಅಡ್ಡಲಾಗಿ ನಿಂತಿದ್ದ ಯುವಕರಿಗೆ ಮನವಿ ಮಾಡಿದ್ದರು. ತಕ್ಷಣವೇ ಯುವಕರು ಅವಾಚ್ಯ ಶಬ್ದಗಳಿಂದ ಯೋಧನಿಗೆ ನಿಂದಿಸಿದ್ದಾರೆ. ದಾರಿ ಕೇಳಿದರೆ ನನ್ನನ್ನೇ ಏಕೆ ಹೀಗೆ ನಿಂದಿಸುತ್ತೀರಾ ಎಂದು ಯೋಧ ಮರು ಪ್ರಶ್ನಿಸಿದ್ದಾರೆ. ಈ ವೇಳೆ ನಮ್ಮನ್ನೇ ಪ್ರಶ್ನೆ ಮಾಡ್ತೀಯಾ ಎಂದು ಬಿಯರ್ ಬಾಟಲಿಯಿಂದ ಪುನೀತ್ ಎಂಬುವವ ತಲೆಗೆ ಹೊಡೆದಿದ್ದಾನೆ.
ಬಳಿಕ ಯೋಧ ಗೋವಿಂದರಾಜು ದೂರಿನ ಅನ್ವಯ ಮಧುಗಿರಿಯ ಕೋಡಗದಲದ ಪುನೀತ್, ಹುಣಸವಾಡಿಯ ಗೌರಿಶಂಕರ್, ಶಿವ, ಕೊರಟಗೆರೆಯ ಅರಸಪುರದ ಭರತ್, ಕೊಡುಗೇನಹಳ್ಳಿಯ ದಿಲೀಪ್ ಎಂಬಾತನ್ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿ 10 ಸೆಕ್ಷನಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಕವಿವಿಯಲ್ಲಿ ಹಲ್ಲೆ, ಸರಗಳ್ಳತನ ಯತ್ನ ಪ್ರಕರಣ ಬೆಳಕಿಗೆ, ತನಿಖೆ ಆರಂಭ: ಭದ್ರತೆ ಹೆಚ್ಚಿಸಲು ಸೂಚನೆ - Karnataka University