ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ನಾಲೆ ದುರಂತ ಸಂಭವಿಸಿದೆ. ತಾಲೂಕಿನ ಮಾಚಹಳ್ಳಿ ಗ್ರಾಮದ ಬಳಿ ವಿಸಿ ನಾಲೆಗೆ ಕಾರೊಂದು ಉರುಳಿಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಮತ್ತಿಬ್ಬರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರ ಮಧ್ಯಾಹ್ನ ಪಾಂಡವಪುರದಿಂದ ಮಂಡ್ಯಕ್ಕೆ ಬರುತ್ತಿದ್ದ ಕಾರೊಂದು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಉರುಳಿಬಿದ್ದಿದೆ. ಕಾರು ಉರುಳಿದ್ದನ್ನು ಕಂಡ ಸ್ಥಳೀಯರು ಅದರಲ್ಲಿದ್ದ ಓರ್ವನನ್ನು ರಕ್ಷಣೆ ಮಾಡಿದ್ದಾನೆ. ಸದ್ಯ ಓರ್ವನ ಮೃತದೇಹವನ್ನು ನಾಲೆಯಿಂದ ಹೊರತೆಗೆಯಲಾಗಿದೆ. ಕಾರಿನಲ್ಲಿ ಇನ್ನೂ ಇಬ್ಬರ ಶವಗಳು ಇರುವ ಶಂಕೆ ಮೂಡಿದ್ದು, ಅವರನ್ನು ಮೇಲೆಕ್ಕೆತ್ತುವ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಶಿವಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದಾರೆ. ವಿಸಿ ನಾಲೆಯಿಂದ ಕಾರನ್ನು ಹೊರ ತೆಗೆಯಲು ಮುಂದಾಗಿದ್ದಾರೆ.
ತಡೆಗೋಡೆ ಇಲ್ಲದ ಕಾರಣಕ್ಕೆ ಕಾರು ವಿಸಿ ನಾಲೆಯಲ್ಲಿ ಮುಳುಗಿದೆ. ಈ ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ನಡೆದಿದ್ದು, ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡುತ್ತದೆ. ಆದರೆ, ಕೆಲ ದಿನಗಳಲ್ಲಿ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗುತ್ತಿದ್ದಂತೆ ಸುಮ್ಮನಾಗುತ್ತಾರೆ. ಹೀಗೆ ಮತ್ತೊಂದು ಅವಘಡ ಸಂಭವಿಸಿದಾಗಲೇ ಅವರು ಮತ್ತೆ ತಡೆಗೋಡೆ ಬಗ್ಗೆ ಮಾತನಾಡುವುದು. ಪ್ರತಿದಿನ ಈ ಮಾರ್ಗದಲ್ಲಿ ಹತ್ತಾರು ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತವೆ. ಈ ದುರ್ಘಟನೆಯಿಂದ ನಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.