ಹುಬ್ಬಳ್ಳಿ:ಮೂರು ವರ್ಷದ ಪೋರನೊಬ್ಬ ಅಪಾರ ಜ್ಞಾಪಕ ಶಕ್ತಿಯಿಂದ ದೊಡ್ಡ ಸಾಧನೆ ಮಾಡಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಇಂಡಿಯಾ ಬುಕ್ ಅಪ್ ರೆಕಾರ್ಡನಲ್ಲಿ ಹೆಸರು ದಾಖಲಿಸುವುದರ ಜೊತೆಗೆ ವರ್ಲ್ಡ್ ರೆಕಾರ್ಡ್ ಯುನಿವರ್ಸಿಟಿಯಿಂದ ಗ್ರ್ಯಾಂಡ್ ಮಾಸ್ಟರ್ ಅವಾರ್ಡ್ ಪಡೆದು ಧಾರವಾಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.
ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದ ಗ್ರಾಮೀಣ ಶಿಕ್ಷಣ ಸಂಸ್ಥೆಯ ಕನ್ನಡ ಭಾಷೆಯ ಸಹ ಶಿಕ್ಷಕಿಯಾದ ಮಂಜುಳಾ ಒಣರೊಟ್ಟಿ ಹಾಗೂ ಆರ್ಯವರ್ಧನ್ ಇಂಗ್ಲಿಷ್ ಟ್ಯೂಷನ್ ಕ್ಲಾಸಸ್ ಮಾಲೀಕ ಪ್ರಕಾಶ ಕೋಟಿ ಇವರ ಪುತ್ರ ಆರ್ಯವರ್ಧನ್ ಕೋಟೆ ಎಂಬಾತನೇ ಈ ಸಾಧನೆ ಮಾಡಿದ ಬಾಲಕ. ಈ ಬಾಲಕನಿಗೆ 3 ವರ್ಷ 5 ತಿಂಗಳುಗಳಾಗಿದ್ದು, ಪ್ರಸ್ತುತ ನವಲಗುಂದದ ಶ್ರೀ ಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ನರ್ಸರಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸಾಧನೆಗಳು: ಈ ಬಾಲಕ 1500ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಾನೆ. ಭಾರತದ 29 ರಾಜ್ಯಗಳು ಮತ್ತು ರಾಜಧಾನಿಗಳ ಹೆಸರನ್ನು ಕೇವಲ 40 ಸೆಕೆಂಡ್ನಲ್ಲಿ ಹೇಳಬಲ್ಲ. 25ಕ್ಕೂ ಹೆಚ್ಚು ದೇಶಗಳ ಹೆಸರು, 1947 - 2024 ಪ್ರಧಾನ ಮಂತ್ರಿಗಳ ಹೆಸರು ಮತ್ತು ಜ್ಞಾನಪೀಠ ಪ್ರಸಸ್ತಿ ವಿಜೇತರ ಹೆಸರು ಅನುಕ್ರಮವಾಗಿ, 25ಕ್ಕೂ ಹೆಚ್ಚು ವಚನಕಾರರ ಅಂಕಿತನಾಮ, 25ಕ್ಕೂ ಹೆಚ್ಚು ಸ್ವಾತಂತ್ರ ಹೋರಾಟಗಾರರು ಮತ್ತು 50 ಕ್ಕೂ ಹೆಚ್ಚು ಘೋಷವಾಕ್ಯಗಳು, ಕೇಂದ್ರ ಮಂತ್ರಿಗಳ ಹೆಸರು ಮತ್ತು ಖಾತೆ, ರಾಜ್ಯ ಮಿನಿಸ್ಟರ್ ಹೆಸರು ಮತ್ತು ಖಾತೆ, ಪಟಪಟನೇ ಹೇಳುತ್ತಾನೆ.