ಬೆಂಗಳೂರು: ಬದಲಾಗುತ್ತಿರುವ ಇಂದಿನ ಹೈಟೆಕ್ ಯುಗದಲ್ಲಿ ಸಂಬಂಧಗಳು ಕ್ಷೀಣಿಸುತ್ತಿವೆ. ಬದುಕಿ ಬಾಳಬೇಕಾದ ದಂಪತಿಗಳು, ಜೀವನ ಕಟ್ಟಿಕೊಳ್ಳಬೇಕಾದ ಪ್ರೇಮಿಗಳ ನಡುವೆ ಕ್ಷುಲ್ಲಕ ಕಾರಣಗಳಿಗಾಗಿ ವಿರಸ ಮೂಡಿ ಕೊಲೆಯಲ್ಲಿ ಅಂತ್ಯವಾಗುತ್ತಿವೆ.
ಹೌದು, ಕಳೆದ ನಾಲ್ಕು ವರ್ಷಗಳಲ್ಲಿ 792 ಸಂಗಾತಿಗಳ ಮತ್ತು 114 ಪ್ರೇಮಿಗಳು ಕೊಲೆಯಾಗಿದ್ದಾರೆ. ಈ ವರ್ಷ ಆಗಸ್ಟ್ ಅಂತ್ಯಕ್ಕೆ ರಾಜ್ಯದಲ್ಲಿ ನಡೆದಿದ್ದ 702 ಕೊಲೆಗಳ ಪೈಕಿ 138 ಸಂಗಾತಿಗಳು, 23 ಮಂದಿ ಪ್ರೇಮಿಗಳು ಸೇರಿ 161 ಮಂದಿ ಹತ್ಯೆಗೀಡಾಗಿದ್ದಾರೆ. 2023 ಹಾಗೂ 2022ರಲ್ಲಿ ಕ್ರಮವಾಗಿ 252 ಹಾಗೂ 263 ಮಂದಿ ಹತ್ಯೆಯಾಗಿರುವುದಾಗಿ ಪೊಲೀಸ್ ಅಂಕಿ - ಅಂಶಗಳು ಬಹಿರಂಗಪಡಿಸಿವೆ.
ಕಳೆದ ಎಂಟು ತಿಂಗಳಲ್ಲಿ ನಡೆದ 702 ಹತ್ಯೆಗಳ ಪೈಕಿ 161 ಪ್ರಕರಣಗಳಲ್ಲಿ ಸಂಗಾತಿ ಹಾಗೂ ಪ್ರೇಮಿಗಳ ಕೊಲೆಯಾಗಿದೆ. ಅಂದರೆ ಪ್ರತಿ ನಾಲ್ಕು ಪ್ರಕರಣಗಳಲ್ಲಿ ದಂಪತಿಗಳ ಕೊಲೆಯೂ ಒಂದಾಗಿದೆ. ರಾಜ್ಯದಲ್ಲಿ ಭಾವೋದ್ರೇಕದ ಹತ್ಯೆಗಳು ಅಧಿಕವಾಗುತ್ತಿವೆ. ಕಳೆದ ವರ್ಷ ದಾಖಲಾಗಿದ್ದ 1,221 ಕೊಲೆಗಳಲ್ಲಿ ಶೇ.21ರಷ್ಟು ಇದೇ ತರಹದ ಮರ್ಡರ್ಗಳಾಗಿದ್ದವು. ದುರಾದೃಷ್ಟವಶಾತ್, ಕಳೆದ ಎಂಟು ತಿಂಗಳಲ್ಲಿ ಇದರ ಪ್ರಮಾಣ ಶೇ.23ರಷ್ಟು ಹೆಚ್ಚಿದೆ. ಈ ಮೂಲಕ ಕರ್ನಾಟಕದಲ್ಲಿ ಭಾವೋದ್ರೇಕ ಹತ್ಯೆಗಳ ಪ್ರಮಾಣ ಏರಿಕೆಯಾಗಿರುವುದು ಕಳವಳಕಾರಿ ಅಂಶವಾಗಿದೆ.
ಇತ್ತೀಚೆಗೆ ಶೀಲ ಶಂಕಿಸಿ ಮನೆಯಲ್ಲಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿ ಕೆಂಗೇರಿ ಠಾಣೆ ಪೊಲೀಸರ ಅತಿಥಿಯಾಗಿದ್ದ. ತನ್ನ ಪ್ರಿಯತಮೆಯನ್ನ ದೂರ ಮಾಡಿದಕ್ಕೆ ಆಕ್ರೋಶಗೊಂಡ ಯುವಕನೋರ್ವ ಜುಲೈ 24ರಂದು ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿರುವ ಪಿಜಿಯೊಂದಕ್ಕೆ ನುಗ್ಗಿ ಬಿಹಾರ ಮೂಲದ ಯುವತಿಯನ್ನು ಚಾಕು ಇರಿದು ಹತ್ಯೆ ಮಾಡಿದ್ದ. ಇಂತಹ ಸಾಕಷ್ಟು ಘಟನೆಗಳು ರಾಜ್ಯದಲ್ಲಿ ನಡೆದಿವೆ.
ಹತ್ಯೆಗೆ ಕಾರಣಗಳೇನು?:ಪ್ರಸ್ತುತಕುಟುಂಬದ ಪ್ರಾಧಾನ್ಯತೆ ಕಡಿಮೆಯಾಗಿ ದಂಪತಿ ವಿಭಕ್ತ ಕುಟುಂಬವಾಗಿ ಬೇರ್ಪಡುತ್ತಿದ್ಧಾರೆ. ಗಂಡ - ಹೆಂಡತಿ ಇಬ್ಬರು ಸುಶಿಕ್ಷಿತರಾಗಿದ್ದರೂ ಇಬ್ಬರು ನಡುವೆ ಹೊಂದಾಣಿಕೆ ಮೂಡದ ಕಾರಣ ಕ್ಷುಲ್ಲಕ ಕಾರಣಗಳಿಗೆ ಹತ್ಯೆ ನಡೆಯುತ್ತಿದೆ. ಅಕ್ರಮ ಸಂಬಂಧ, ಶೀಲ ಶಂಕೆ ಹಾಗೂ ದಾಂಪತ್ಯ ಜೀವನ ಸರಿಯಿಲ್ಲದಿರುವ ಕಾರಣಗಳಿಗಾಗಿಯೇ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಇನ್ನೂ ಪ್ರೇಮಿಗಳ ವಿಷಯಕ್ಕೆ ಬರುವುದಾದರೆ ಲೈಂಗಿಕ ಹಪಾಹಪಿ, ಪ್ರೀತಿ ನಿರಾಕರಣೆಯೇ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.